ಪಾಂಡವಪುರ ತಾಲೂಕಿನ ಸಿಂಗ್ರಿಗೌಡನಕೊಪ್ಪಲಿನಲ್ಲಿ ‘ರೋಗ ನಿರ್ವಹಣೆಗಾಗಿ ಬೀಜೋಪಚಾರ’ ಎಂಬ ವಿಷಯ ಕುರಿತು ಕ್ಷೇತ್ರ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. 
ರಾಜ್ಯ

ರೋಗ ನಿರ್ವಹಣೆಗಾಗಿ ಬೀಜೋಪಚಾರ ಪ್ರಾತ್ಯಕ್ಷಿಕೆ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯದ ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯ
  • ಅಂತಿಮ ವರ್ಷದ ವಿದ್ಯಾರ್ಥಿಗಳು
ಪಾಂಡವಪುರ: ಮಂಡ್ಯದ ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಆರ್‌ಎಡಬ್ಲ್ಯೂಇ ಕಾರ್ಯಕ್ರಮದಡಿ ತಾಲೂಕಿನ ಸಿಂಗ್ರಿಗೌಡನಕೊಪ್ಪಲಿನಲ್ಲಿ ‘ರೋಗ ನಿರ್ವಹಣೆಗಾಗಿ ಬೀಜೋಪಚಾರ’ ಎಂಬ ವಿಷಯದ ಕುರಿತು ಕ್ಷೇತ್ರ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದರು.
ತೊಗರಿ ಬೀಜಗಳಿಗೆ ಶಿಲೀಂಧ್ರನಾಶಕ, ಅಲಸಂದೆ ಬೀಜಗಳಿಗೆ ಟ್ರೈಕೋಡರ್ಮಾ ಮತ್ತು ಭತ್ತದ ಸಸಿಗಳಿಗೆ ಅಜೋಸ್ಪಿರಿಲಮ್ ಜೈವಿಕ ಗೊಬ್ಬರದ ದ್ರಾವಣದಲ್ಲಿ ಅದ್ದುವ ವಿಧಾನ ಹಾಗೂ ಬೀಜಾಮೃತ ತಯಾರಿಕೆಯನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ತೋರಿಸಿಕೊಟ್ಟರು. ಅಲ್ಲದೆ ಬೀಜೋಪಚಾರದಲ್ಲಿ ಜೈವಿಕ ನಿಯಂತ್ರಣಕಾರಕಗಳ ಬಳಕೆ ಮತ್ತು ಅವುಗಳ ಮಹತ್ವದ ಕುರಿತು ರೈತರಿಗೆ ವಿಸ್ತಾರವಾಗಿ ವಿವರಿಸಿದರು.
ಮಾಸ್ಕ್ ಮತ್ತು ಗ್ಲೋವ್ಸ್‌ಗಳಂತಹ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಯಿತು. ಸುಮಾರು 20 ರೈತರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು. ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಶೇರಖಾನೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ರೇಷ್ಮೆ ಕೃಷಿಯಲ್ಲಿ ತಾಂತ್ರಿಕ ಜ್ಞಾನದ ಅರಿವು: ರೈತರಿಗೆ ರೇಷ್ಮೆ ಕೃಷಿಯ ಮಹತ್ವ, ರೇಷ್ಮೆ ಹುಳು ಸಾಕಣೆಯಲ್ಲಿನ ವೈಜ್ಞಾನಿಕ ವಿಧಾನಗಳು, ಹುಳುಗಳ ನಿರ್ವಹಣೆ, ಗುಣಮಟ್ಟದ ರೇಷ್ಮೆ ಉತ್ಪಾದನೆ ಹಾಗೂ ರೇಷ್ಮೆ ಕೃಷಿಯಿಂದ ದೊರೆಯುವ ಹೆಚ್ಚುವರಿ ಆದಾಯದ ಕುರಿತು ಡಾ.ಎಂ.ರಾಜು ಹಾಗೂ ಡಾ.ಪ್ರವೀಣ್ ಮಾಹಿತಿ ನೀಡಿದರು.
ಗುಣಮಟ್ಟದ ರೇಷ್ಮೆ ಮೊಟ್ಟೆಗಳನ್ನು ಆಯ್ಕೆ ಮಾಡುವುದು, ಆರೋಗ್ಯಕರ ರೇಷ್ಮೆ ಹುಳುಗಳನ್ನು ಬೆಳೆಸುವುದು, ಹುಳುಗಳಿಗೆ ಸರಿಯಾದ ಸಮಯದಲ್ಲಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಹಿಪ್ಪುನೇರಳೆ ಎಲೆಗಳನ್ನು ನೀಡುವುದು, ಹುಳುಗಳ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ರೋಗಬಾಧೆ ಕಂಡುಬಂದಾಗ ಅನುಸರಿಸಬೇಕಾದ ನಿಯಂತ್ರಣ ವಿಧಾನಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಯಿತು.
ರೇಷ್ಮೆ ಹುಳು ಸಾಕಣೆಯ ಕೊಠಡಿ ಸ್ವಚ್ಛತೆ, ಉಪಕರಣಗಳ ಶುದ್ಧೀಕರಣ, ಹುಳುಗಳಿಗೆ ಸೂಕ್ತ ಗಾಳಿ ಸಂಚಾರ, ತ್ಯಾಜ್ಯ ನಿರ್ವಹಣೆ ಮತ್ತು ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ರೈತರಿಗೆ ಪ್ರಾಯೋಗಿಕವಾಗಿ ಸಲಹೆ ನೀಡಲಾಯಿತು.