ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ
- ಈಗಾಗಲೇ 32 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ನೋಂದಣಿ ಮಾಡಿಕೊಂಡಿದ್ದು, ಭಾನುವಾರದಿಂದಲೇ ಹಾಜರಾಗುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚನೆ
- ಮಂಡಳಿಯು ಈಗಾಗಲೇ ಪ್ರಕಟಿಸಿರುವಂತೆ ಏ.7ರಂದು ಫಲಿತಾಂಶ ನೀಡುವ ಗುರಿ ಹೊಂದಿದೆ.
- ಮಾ.22ರಿಂದ ಏ.2ರವರೆಗೆ ಮೌಲ್ಯಮಾಪನ ಕಾರ್ಯ ಮುಗಿಯಲಿದೆ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮಾ.22ರಿಂದ ಆರಂಭವಾಗಲಿದೆ.
ಈಗಾಗಲೇ 32 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ನೋಂದಣಿ ಮಾಡಿಕೊಂಡಿದ್ದು, ಭಾನುವಾರದಿಂದಲೇ ಹಾಜರಾಗುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (ಕೆಎಸ್‌ಇಎಬಿ) ಸೂಚನೆ ನೀಡಿದೆ.
ಇನ್ನು ಪರೀಕ್ಷೆ ಕಾರ್ಯಕ್ಕೂ ಮೊದಲು ಉತ್ತರ ಪತ್ರಿಕೆಗಳ ಕೋಡಿಂಗ್ ಕೆಲಸವು ಮಾ.17ರಿಂದಲೇ ಆರಂಭವಾಗಿದ್ದು, ಬಹುತೇಕ ಮುಗಿದಿದೆ. ಉಳಿದಿರುವ ಕೆಲಸವು ಶುಕ್ರವಾರ ಪೂರ್ಣಗೊಂಡಿದೆ. ಜಿಲ್ಲಾ ಹಂತದಲ್ಲಿ ಉತ್ತರ ಪತ್ರಿಕೆಗಳ ಹಂಚಿಕೆ ಕಾರ್ಯ ಮುಗಿದಿದೆ. ಭಾನುವಾರದಿಂದಲೇ ಮೌಲ್ಯಮಾಪನ ಕಾರ್ಯವು ಸಂೂರ್ಣವಾಗಿ ಆರಂಭವಾಗಲಿದೆ ಎಂದು ಮಂಡಳಿಯ ಅಧ್ಯಕ್ಷ ಪ್ರಕಾಶ್ ಜಿ.ಟಿ. ನಿಟ್ಟಾಲಿ ತಿಳಿಸಿದ್ದಾರೆ.
ಫಲಿತಾಂಶವನ್ನು ನಿಗದಿತ ಸಮಯದಲ್ಲಿ ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರನ್ನು ಸಹ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಏ.7ಕ್ಕೆ ಫಲಿತಾಂಶ ಗುರಿ:
ಮಂಡಳಿಯು ಈಗಾಗಲೇ ಪ್ರಕಟಿಸಿರುವಂತೆ ಏ.7ರಂದು ಫಲಿತಾಂಶ ನೀಡುವ ಗುರಿ ಹೊಂದಿದೆ. ಈ ಕಾರಣದಿಂದ ಮೌಲ್ಯಮಾಪನ ಕಾರ್ಯವನ್ನು ಬೇಗನೇ ಆರಂಭಿಸುತ್ತಿದೆ. ಮಾ.22ರಿಂದ ಏ.2ರವರೆಗೆ ಮೌಲ್ಯಮಾಪನ ಕಾರ್ಯ ಮುಗಿಯಲಿದೆ. ಹೆಚ್ಚೆಂದರೆ, ಏ.4ರೊಳಗೆ ಮೌಲ್ಯಮಾಪನ ಕಾರ್ಯ ಮುಗಿಯಲಿದೆ. ಉಳಿದ ತಾಂತ್ರಿಕ ಕೆಲಸಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಿ ಏ.7ರಂದು ಫಲಿತಾಂಶ ನೀಡುವ ಉದ್ದೇಶದೊಂದಿಗೆ ಮೌಲ್ಯಮಾಪನ ಕಾರ್ಯ ಆರಂಭಿಸಲಾಗಿದೆ.
ಪಿಯು ಉಪನ್ಯಾಸಕರ ಸಂಘವು ಮೌಲ್ಯಮಾಪನ ಕಾರ್ಯಕ್ಕೆ ಒಪ್ಪಿಕೊಂಡಿರುವುದರಿಂದ ಸುಸೂತ್ರವಾಗಿ ಆರಂಭವಾಗಲಿದೆ. ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಫೆ.29ರಿಂದ ಮಾ.17ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಹಾಜರಾಗಿದ್ದರು.