- ಹಾರೋಹಳ್ಳಿ ಸಮೀಪದಲ್ಲಿಯೂ ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತೆ
- ಸಮಗ್ರ ಕಾರ್ಯಸಾಧ್ಯತಾ (ಫೀಸಿಬಿಲಿಟಿ) ಅಧ್ಯಯನ ವರದಿ
ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತ ಸ್ಥಳದ ಆಯ್ಕೆ ಕುರಿತು ಸಮಗ್ರ ಚರ್ಚೆ ನಡೆಯಿತು. ಕನಕಪುರ ಭಾಗಕ್ಕೆ ವಿಮಾನ ನಿಲ್ದಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತೀವ್ರ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ಸೋಮಹಳ್ಳಿ, ಚೂಡಹಳ್ಳಿ ಹಾಗೂ ನೆಲಮಂಗಲ ಸಮೀಪದ ಪ್ರದೇಶಗಳಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತೆ ಕುರಿತು ಅಧ್ಯಯನ ನಡೆಸಲಾಗಿದ್ದು, ಈ ಸ್ಥಳಗಳ ಕುರಿತ ಅಧ್ಯಯನ ವರದಿಯನ್ನು ಪರಿಶೀಲಿಸಲಾಯಿತು.
ಇದರೊಂದಿಗೆ ಹಾರೋಹಳ್ಳಿ ಸಮೀಪದಲ್ಲಿಯೂ ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತೆಗಳ ಕುರಿತು ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಅಧ್ಯಯನ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಖಚಿತಪಡಿಸಿವೆ.
ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸಿ ಸಮಗ್ರ ಕಾರ್ಯಸಾಧ್ಯತಾ (ಫೀಸಿಬಿಲಿಟಿ) ಅಧ್ಯಯನ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಸಿಂಗಾಪುರ ಮೂಲದ ಸಂಸ್ಥೆಗೆ ವಹಿಸಲು ಸೂಚಿಸಲಾಗಿದೆ.
ಬೆಂಗಳೂರಿನ ಹೊರ ವಲಯದಲ್ಲಿ ತುಮಕೂರು, ಕುಣಿಗಲ್, ನೆಲಮಂಗಲ, ಹೊಸೂರು, ಸೋಮಹಳ್ಳಿ, ಚೂಡಹಳ್ಳಿ ಸೇರಿದಂತೆ ಒಟ್ಟು 6 ಕಡೆಯಲ್ಲಿ ವಿಮಾನ ಸ್ಥಾಪನೆ ಕುರಿತು ಚರ್ಚೆ ನಡೆದಿತ್ತು. ಕೊನೆಯಲ್ಲಿ ಸೋಮಹಳ್ಳಿ, ಚೂಡಹಳ್ಳಿ ಹಾಗೂ ನೆಲಮಂಗಲ ಸೂಕ್ತ ಎಂದು ನಿರ್ಧರಿಸಲಾಗಿತ್ತು. ಅಂತಿಮವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಯೇ ವಿಮಾನ ನಿಲ್ದಾಣ ಆಗುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ಪ್ರಾರಂಭಗೊಂಡಿವೆ.
ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*ಮತ್ತೊಂದು ವಿಮಾನ ನಿಲ್ದಾಣಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಕಡಿಮೆ ಬೆಲೆ ಇರುವ ಜಾಗವನ್ನು ಗುರುತಿಸುವಂತೆ ಸೂಚಿಸಿದ್ದೇನೆ. ವಿಮಾನ ನಿಲ್ದಾಣ ಎಲ್ಲಿ ಮಾಡಬೇಕು ಎನ್ನುವ ಫೀಸಬಲಿಟಿ ರಿಪೋರ್ಟ್ ಬಂದ ಮೇಲೆ ಕ್ರಮ ವಹಿಸಲಾಗುವುದು.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ