ಗುಲ್ಬರ್ಗ ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಕೌಟ್ಸ್&ಗೈಡ್ಸ್ ತರಬೇತಿ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಉದ್ಘಾಟಿಸಿದರು. ಪಿ.ಜಿ.ಆರ್.ಸಿಂಧ್ಯಾ, ಪ್ರೊ.ರಮೇಶ ಲಂಡನಕರ್, ಡಾ.ಎನ್.ಜಿ.ಕಣ್ಣೂರ್, ಡಾ.ಎಚ್.ಎಸ್.ಜಂಗೆ, ಸಿದ್ದಪ್ಪ ಸುಳ್ಳದ್, ಪ್ರಮೀಳಾ ಪಾಟೀಲ್, ಬಾಬುರಾವ್ ಲಿಂಬೂರಿ ಇತರರಿದ್ದರು.
- ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅಭಿಪ್ರಾಯ
- ಗುಲ್ಬರ್ಗ ವಿವಿಯಲ್ಲಿ ತರಬೇತಿ ಕಾರ್ಯಕ್ರಮ
ಕಲಬುರಗಿ: ಯುವಜನರಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಬೆಳಸುವಲ್ಲಿ ಸ್ಕೌಟ್ಸ್-ಗೈಡ್ಸ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕುಲಪತಿ ಪ್ರೊ.ಶಶಿಕಾಂತ್ ಎಸ್.ಉಡಿಕೇರಿ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದಡಿ ಶುಕ್ರವಾರ ಆಯೋಜಿಸಿದ ರಾಜ್ಯ ಮಟ್ಟದ ಕಬ್ ಮಾಸ್ಟರ್, ಸ್ಕೌಟ್ ಮಾಸ್ಟರ್, ಪ್ಲಾಕ್ ಲೀಡರ್ ಮತ್ತು ಗೈಡ್ಸ್ ಕ್ಯಾಪ್ಟನ್ ಮೂಲ ಹಾಗೂ ಮುಂದುವರಿದ ತರಬೇತಿ ಮತ್ತು ಸಮಾಲೋಚನಾ ಸಭೆ ಉದ್ಘಾಟಿಸಿದ ಅವರು, ಸಮಾಜದಲ್ಲಿ ಬದುಕುವ ರೀತಿ, ನೀತಿ ಅರಿಯಲು ಇಂಥ ತರಬೇತಿಗಳು ಸಹಕಾರಿಯಾಗಿವೆ ಎಂದರು.
ಯುವ ಜನಾಂಗವನ್ನು ಉತ್ತಮ ಪ್ರಜೆಗಳಾಗಿ ರೂಪಿಸಲು ಶಿಕ್ಷಣದೊಂದಿಗೆ ಎನ್ಎಸ್ಎಸ್, ಎನ್ಸಿಸಿ, ಕ್ರೀಡಾ ಮನೋಭಾವ ಬೆಳೆಸುವುದು ಮುಖ್ಯ. ವಿದ್ಯಾರ್ಥಿ ಶಕ್ತಿಯನ್ನು ದೇಶದ ಶಕ್ತಿಯಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ಪ್ರಸ್ತುತ ಸರ್ಕಾರ ಕೃಷಿ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಎನ್ಎಸ್ಎಸ್, ಎನ್ಸಿಸಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ ಎಂದು ಹೇಳಿದರು.
ಸ್ಕೌಟ್ಸ್-ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಕಲ್ಯಾಣ ಕರ್ನಾಟಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗುಲ್ಬರ್ಗ ವಿವಿ ಬಗ್ಗೆ ಅಭಿಮಾನವಿದೆ. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಮನಸ್ಸು ಮತ್ತು ಆದರ್ಶ ಗುಣ ಬೆಳೆಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಸಿಂಡಿಕೇಡ್ ಸದಸ್ಯ ಸಿದ್ದಪ್ಪ ಸುಳ್ಳದ್ ಪ್ರಾಸ್ತಾವಿಕ ಮಾತನಾಡಿ, ಯುವಕರಲ್ಲಿ ಶ್ರದ್ಧೆ, ದೇಶಪ್ರೇಮ ಮತ್ತು ಮಾನವೀಯ ಮೌಲ್ಯ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೇರಣೆಯಾಗಿದೆ ಎಂದರು.
ಕುಲಸಚಿವ ಪೊ.ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ. ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಚ್.ಎಸ್. ಜಂಗೆ, ಮಲ್ಗಲೇಶ್ವರಿ ಜುಜಾರೆ, ಪ್ರಮೀಳಾ ಪಾಟೀಲ್, ಬಾಬುರಾವ್ ಲಿಂಬೂರಿ, ಶಾಸಿ, ಅಮರೇಶ್ ಕೋರಿ ಸೇರಿ ರಾಜ್ಯದ ವಿವಿಧೆಡೆಯ 153 ಸ್ಕೌಟ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು. ಪೀರಪ್ಪ ಹೂಗೊಂಡ ಸ್ವಾಗತಿಸಿದರು. ಗುರುಲಿಂಗಯ್ಯ ಮತ್ತು ರಾಣಪ್ಪ ಸಂಗನ್ ನಿರೂಪಣೆ ಮಾಡಿದರು. ಜಯಪ್ರಕಾಶ್ ಕಟ್ಟಿಮನಿ ವಂದಿಸಿದರು.
ವಿದೇಶಗಳಲ್ಲೂ ಸ್ಕೌಟ್ಸ್-ಗೈಡ್ಸ್ ಶಿಕ್ಷಣ, ತರಬೇತಿ, ಶಿಬಿರಗಳ ಮೂಲಕ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸಲಾಗುತ್ತಿದೆ. ದೇಶದ ಪ್ರೆಮರಿ, ಹೈಸ್ಕೂಲ್ ಮತ್ತು ಪಿಯುಸಿ ಕಾಲೇಜುಗಳಲ್ಲಿ ಸ್ಕೌಟ್ಸ್-ಗೈಡ್ಸ್ ತರಬೇತಿ, ಶಿಕ್ಷಣ ಆರಂಭಿಸುವ ಬಗ್ಗೆ 30 ವರ್ಷಗಳಿಂದ ಪ್ರಯತ್ನಿಸಿದರೂ ಮಹತ್ವ ಸಿಗುತ್ತಿಲ್ಲ. ರಾಜ್ಯದ ಎಲ್ಲ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಕಲಿಕೆ, ಕೆಪಿಎಸ್ ಶಾಲೆಯಲ್ಲಿ ಒಬ್ಬ ಸ್ಕೌಟ್ಸ್-ಗೈಡ್ಸ್ ಕ್ಯಾಪ್ಟನ್ ನೇಮಕ ಸೇರಿ ವಿವಿಧ ಬೇಡಿಕೆಗಳ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಜತೆ ಚರ್ಚಿಸಲಾಗುವುದು.
— > ಪಿ.ಜಿ.ಆರ್.ಸಿಂಧ್ಯಾ ರಾಜ್ಯ ಆಯುಕ್ತ, ಸ್ಕೌಟ್ಸ್-ಗೈಡ್ಸ್