ಹೊಸ ಶೈಕ್ಷಣಿಕ ವರ್ಷದ ಶಾಲಾರಂಭ
- ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಇಲ್ಲಿಯವರೆಗೂ ಶೇ.82.54ರಷ್ಟು ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.
- ಶಾಲೆ ಆರಂಭದ ದಿನವೇ ಒಂದು ಜೊತೆ ಸಮವಸ್ತ್ರ ವಿತರಿಸಲು ಸೂಚಿಸಲಾಗಿದೆ. ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮವಸ್ತ್ರಗಳನ್ನು ನೀಡಲಾಗಿದೆ.
- ಶೂ ಮತ್ತು ಸಾಕ್ಸ್ ವಿತರಿಸಲು ಇನ್ನೂ ಸರ್ಕಾರದಿಂದ ಆದೇಶ ಹೊರಡಿಸಬೇಕಿದೆ. ಶಾಲೆಗಳು ಆರಂಭವಾದ ಸ್ವಲ್ವ ದಿನಗಳ ಬಳಿಕ ಶೂ ಮತ್ತು ಸಾಕ್ಸ್ ದೊರೆಯಬಹುದು.
ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಶಾಲಾರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕರೆ ನೀಡಿದ್ದಾರೆ.
ಮೇ 29, 30 ಮತ್ತು 31 ರಂದು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಜೂ.1 ರಂದು ಶಾಲೆಗೆ ಬರುವ ಮಕ್ಕಳನ್ನು ತಳಿರು ತೋರಣ ಕಟ್ಟಿ, ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು. ಮಕ್ಕಳಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡುವ ಮೂಲಕ ಅವರಲ್ಲಿ ಶಾಲೆಗೆ ಬರುವ ಉತ್ಸಾಹವನ್ನು ಹೆಚ್ಚಿಸಬೇಕು. ಸರ್ಕಾರವು ರಾಜ್ಯಾದ್ಯಂತ ಒಂದು ಸಾವಿರ ಕೆಪಿಎಸ್ ಆರಂಭಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಶಾಲೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿ:
ರಾಜ್ಯದಲ್ಲಿ 46 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ದಾನಿಗಳು ’ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಆರ್ಥಿಕ ನೆರವು ನೀಡಬಹುದು. ಈ ಅನುದಾನವನ್ನು ಶಾಲೆಗಳಿಗೆ ಸ್ಮಾರ್ಟ್ ಟಿವಿ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣ, ಫ್ಯಾನ್ ಮತ್ತು ಲ್ಯಾಬ್ ಉಪಕರಣಗಳನ್ನು ಒದಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದರು.
ದಾಖಲಾತಿ ಹೆಚ್ಚಿಸಲು ಒತ್ತು:
ಖಾಸಗಿ ಶಾಲೆಗಳಿಗಿಂತ ಅತ್ಯುತ್ತಮ ಹಾಗೂ ನುರಿತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ ಎಂಬುದನ್ನು ಪಾಲಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ದಾಖಲಾತಿ ಹೆಚ್ಚಿಸಬೇಕು. ಪ್ರತಿದಿನ ಮೊಟ್ಟೆ/ಬಾಳೆಹಣ್ಣು ಕೂಡ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಶೇ.83 ಪಠ್ಯಪುಸ್ತಕ ವಿತರಣೆ
ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಇಲ್ಲಿಯವರೆಗೂ ಶೇ.82.54ರಷ್ಟು ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಒಟ್ಟಾರೆ 9.34 ಕೋಟಿ ಪಠ್ಯಪುಸ್ತಕಗಳ ಬೇಡಿಕೆ ಇತ್ತು. ಇಲ್ಲಿಯವರೆಗೂ 8.48 (ಶೇ..9077)ರಷ್ಟು ಮುದ್ರಣ ಕಾರ್ಯ ಮುಗಿದಿದ್ದು, ಶೇ.82.54ರಷ್ಟು ಪುಸ್ತಕಗಳನ್ನು ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಜೂ.1ರಂದು ಆಗಮಿಸುವ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕಗಳನ್ನು ವಿತರಿಸಿ ಶಾಲೆಯನ್ನು ಆರಂಭಿಸಲು ಅನುಕೂಲವಾಗಲಿದೆ.
ಒಂದು ಜೊತೆ ಸಮವಸ್ತ್ರಕ್ಕೆ ಸಿದ್ಧ
ಶಾಲೆ ಆರಂಭದ ದಿನವೇ ಒಂದು ಜೊತೆ ಸಮವಸ್ತ್ರ ವಿತರಿಸಲು ಸೂಚಿಸಲಾಗಿದೆ. ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮವಸ್ತ್ರಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಟ್ಟೆಯನ್ನು ವಿತರಿಸಲಾಗುತ್ತದೆ.
ಶೂ, ಸಾಕ್ಸ್ ಸ್ವಲ್ವ ವಿಳಂಬ
ಶೂ ಮತ್ತು ಸಾಕ್ಸ್ ವಿತರಿಸಲು ಇನ್ನೂ ಸರ್ಕಾರದಿಂದ ಆದೇಶ ಹೊರಡಿಸಬೇಕಿದೆ. ಶಾಲೆಗಳು ಆರಂಭವಾದ ಸ್ವಲ್ವ ದಿನಗಳ ಬಳಿಕ ಶೂ ಮತ್ತು ಸಾಕ್ಸ್ ದೊರೆಯಬಹುದು. ಆದರೆ, ಶಾಲೆಗಳ ದಿನವೇ ಶೂ ಮತ್ತು ಸಾಕ್ಸ್ ದೊರೆಯುವುದಿಲ್ಲವೆಂದು ಇಲಾಖೆ ಮೂಲಗಳು ತಿಳಿಸಿವೆ.