ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 
ರಾಜ್ಯ

ಬಾಲ್ಯ ವಿವಾಹ ತಡೆಗೆ ಶಾಲಾ ದಾಖಲೆ ಪರಿಗಣಿಸಿ-child marriage

ಬೆಂಗಳೂರು: ಆಧಾರ್ ಕಾರ್ಡ್ ಬದಲು ಶಾಲಾ ದಾಖಲೆಗಳಲ್ಲಿ ಉಲ್ಲೇಖಿಸಿರುವ ಜನ್ಮ ದಿನಾಂಕವನ್ನೇ ವಯಸ್ಸಿನ ಪುರಾವೆಯಾಗಿ ಪರಿಗಣಿಸುವಂತೆ ಆದೇಶ ಹೊರಡಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ, ಮಕ್ಕಳ ಹಕ್ಕುಗಳ ಟ್ರಸ್ಟ್ ಪತ್ರ ಬರೆದು ಒತ್ತಾಯಿಸಿದೆ.
ರಾಜ್ಯಾದ್ಯಂತ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದರಿಂದಾಗಿ ತಾಯಂದಿರ ಮರಣ ಪ್ರಮಾಣ ಜಾಸ್ತಿಯಾಗಿದೆ. ಅಪೌಷ್ಟಿಕ ನವಜಾತು ಶಿಶುಗಳ ಜನನವೂ ಏರಿಕೆಯಾಗಿದೆ. ಈ ಸಮಸ್ಯೆ ಇಂದಿಗೂ ಬಗೆಹರಿಯದೇ ಉಳಿದಿದೆ. ರಾಯಚೂರಿನಲ್ಲಿ ದಾಖಲಾದ ಬಾಲ್ಯ ವಿವಾಹ ಕೇಸ್‌ನಲ್ಲಿ 24 ವರ್ಷದ ಆರೋಪಿಯನ್ನು ಶಾಲಾ ದಾಖಲೆಯಲ್ಲಿ ಮತ್ತು ಆಕೆಯ ಆಧಾರ್ ಕಾರ್ಡ್‌ನಲ್ಲಿನ ಜನ್ಮದಿನಾಂಕದ ವ್ಯತ್ಯಾಸಗಳಿಂದ ಕರ್ನಾಟಕ ಹೈಕೋರ್ಟ್, ಕೇಸ್ ಖುಲಾಸೆಗೊಳಿಸಿದೆ. ಸಾಕಷ್ಟು ಸಂದರ್ಭದಲ್ಲಿ ಹುಡುಗಿಯರ ಸಂಬಂಧಿಕರು, ಆಧಾರ್ ಕಾರ್ಡ್‌ನಲ್ಲಿರುವ ಜನ್ಮ ದಿನಾಂಕವನ್ನು ಬದಲಾಯಿಸುತ್ತಾರೆ. ಹಾಗಾಗಿ, ಶಾಲಾ ದಾಖಲೆಗಳಲ್ಲಿ ಉಲ್ಲೇಖಿಸಿರುವ ದಿನಾಂಕವನ್ನು ವಯಸ್ಸಿನ ಪುರಾವೆಯಾಗಿ ತೆಗೆದುಕೊಳ್ಳಬೇಕು ಎಂದು ಇಲಾಖೆಗೆ ಬರೆದಿರುವ ಪತ್ರದಲ್ಲಿ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮಾ ವಿವರಿಸಿದ್ದಾರೆ.
ಬಾಲ್ಯ ವಿವಾಹ ತಡೆಗೆ ಜಾರಿಯಲ್ಲಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯ ವಿಧಾನಗಳಲ್ಲಿ (ಎಸ್‌ಒಪಿಎಸ್), ಹುಡುಗ ಮತ್ತು ಹುಡುಗಿಯರ ವಯಸ್ಸು ಹೇಗೆ ನಿರ್ಧರಿಸುವುದು ಎಂಬುದರ ಬಗ್ಗೆ ಸರ್ಕಾರ, ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಿದೆ. ಜನನ ಪ್ರಮಾಣದಲ್ಲಿ ಪರಿಗಣಿಸಬೇಕಾದ ಪ್ರಾಥಮಿಕ ದಾಖಲೆಯು ಜನನ ದಿನಾಂಕವಾಗಿದೆ. ಒಂದು ವೇಳೆ ಆ ದಾಖಲೆ ಲಭ್ಯ ಇಲ್ಲದಿದ್ದರೆ, ಶಾಲಾ ದಾಖಲೆಯಲ್ಲಿ ಉಲ್ಲೇಖಿಸಲಾದ ದಿನಾಂಕವನ್ನು ವಯಸ್ಸಿನ ಪುರಾವೆಯಾಗಿ ತೆಗೆದುಕೊಳ್ಳಬಹುದು.
ದಾಖಲೆ ಲಭ್ಯವಿಲ್ಲದಿದ್ದರೆ ಪಾಲಕರ ಅಫಿಡವಿಟ್, ಜಿಲ್ಲಾ ವೈದ್ಯಕೀಯ ಅಧಿಕಾರಿಯಿಂದ ವಯಸ್ಸಿನ ಪರೀಕ್ಷಾ ವರದಿಯನ್ನು ಪೂರಾವೆಯಾಗಿ ಪರಿಗಣಿಸಬಹುದು ಎಂದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿ ಖಾತರಿಪಡಿಸಲಾದ ಮಕ್ಕಳ ಹಕ್ಕು ಉಲ್ಲಂಸುವವರಿಗೆ ಶಿಕ್ಷೆ ಆಗಬೇಕು ಎಂದು ವಾಸುದೇವ್ ಶರ್ಮಾ ಆಗ್ರಹಿಸಿದ್ದಾರೆ.