Influenza virus in childrens  
ರಾಜ್ಯ

ಮಕ್ಕಳು ಹಾಗೂ ಸಿಬ್ಬಂದಿಯಲ್ಲಿ ಜ್ವರ ಶಾಲೆಗೆ ರಜೆ ಘೋಷಣೆ

ಪ್ರಮುಖ ಮುಖ್ಯಾಂಶಗಳು

  • * ಶಾಲೆಯ ಆಡಳಿತ ಮಂಡಳಿಯ ಆರೋಪಗಳನ್ನು ನಿರಾಕರಿಸಿದ ಜಿಬಿಎ ಆರೋಗ್ಯಾಧಿಕಾರಿ

ಬೆಂಗಳೂರು:

ರಿಚರ್ಡ್ಸ್ ಟೌನ್‌ನ ಕ್ಲಾರೆನ್ಸ್ ಪ್ರೌಢಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳು, 21 ಸಿಬ್ಬಂದಿಯಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಐದು ದಿನ ರಜೆ ಘೋಷಿಸಿದ್ದ ಆಡಳಿತ ಮಂಡಳಿ, ಇದಕ್ಕೆ ಬೀದಿ ವ್ಯಾಪಾರಿಗಳೇ ಕಾರಣ ಎಂದು ಆರೋಪಿಸಿದೆ. ಶಾಲೆಯಲ್ಲಿ 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ ಶೇ. 20 ವಿದ್ಯಾರ್ಥಿಗಳು ಹಾಗೂ 21 ಸಿಬ್ಬಂದಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದಂತೆ ಜ್ವರ, ಶೀತ, ಮೈ-ಕೈ ನೋವು ಸೇರಿ ಸಾಮೂಹಿಕ ವೈರಾಣು ಜ್ವರ ಕಾಣಿಸಿಕೊಂಡಿತ್ತು. ಇವರಲ್ಲಿ ಇಬ್ಬರಿಗೆ ಎಚ್1 ಎನ್1 ಸೋಂಕು ದೃಢಪಟ್ಟಿದ್ದು, ಒಬ್ಬರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಾಮೂಹಿಕ ಜ್ವರ ಪ್ರಕರಣಗಳ ವರದಿ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಶಾಲೆಗೆ ಆ. 14 ರಿಂದ 18ರವರೆಗೆ ರಜೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಂಟೆಸ್ಸರಿಯನ್ನು ಮುಚ್ಚಲಾಗಿತ್ತು. 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಆ. 18ರರಿಂದ ಶಾಲೆಗೆ ಹಾಜರಾಗುತ್ತಿದ್ದು, ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಆಫ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಆದಾಗ್ಯೂ, 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿಯೇ ತರಗತಿ ಮುಂದುವರಿಸಲಾಗಿದೆ.

ಜಿಬಿಎ ಸ್ಪಷ್ಟನೆ

ಜಿಬಿಎ ಆರೋಗ್ಯಾಧಿಕಾರಿ ಶಾಲೆಯ ಆಡಳಿತ ಮಂಡಳಿ ಮಾಡುತ್ತಿರುವ ಆರೋಪಗಳನ್ನು ನಿರಾಕರಿಸಿದ್ದು, ಆಹಾರ ಮಾರಾಟ ಮಾಡುವ ಬೀದಿ ವ್ಯಾಪಾರಿಗಳಿಗೂ ಕ್ಲಾರೆನ್ಸ್ ಶಾಲೆಯಲ್ಲಿ ನೂರಾರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಾಂಕ್ರಾಮಿಕವಲ್ಲ, ಆದರೆ ಸಾಂಕ್ರಾಮಿಕ, ವಾಯುಗಾಮಿ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮಾನ್ಯ ಶೀತ ಜ್ವರ. ಇದು ಹೊರಗಿನ ಆಹಾರದಿಂದಾಗಿ ಅಲ್ಲ. ಬಹುಶಃ, ಶಾಲೆಯಲ್ಲಿ ಇದನ್ನು ಗಮನಿಸಿಕೊಳ್ಳದ ಕಾರಣ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ರೋಗ ಹರಡಿದೆ. ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಎಚ್1ಎನ್1 ತಳಿ ಅಥವಾ ಇನ್ಫೂಯೇನ್ಸ ವೈರಾಣು ಪತ್ತೆಯಾಗಿದೆ. ಶಾಲೆಯ 50 ಮೀಟರ್ ವ್ಯಾಪ್ತಿಯೊಳಗೆ ಜಂಕ್ ಫುಡ್ ಮಾರಾಟ ನಿಷೇಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.