ಮಳೆಯಿಂದಾದ ಹಾನಿಗೆ ಸೂಕ್ತ ಪರಿಹಾರ ವಿತರಿಸುವಂತೆ ಆಗ್ರಹಿಸಿ ರೈತರು ಮಲ್ಲಮ್ಮನ ಬೆಳವಡಿ ಗ್ರಾಮದ ಹೊಲಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಸದಾಶಿವ ಮಕ್ಕೊಜಿಗೆ ಮನವಿ ಸಲ್ಲಿಸಿದರು. ವೀರೇಶ ಪಾಟೀಲ, ರವಿ ಸಿದ್ದಣ್ಣವರ, ಯಲ್ಲಪ್ಪ ಜಕಾತಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮಲ್ಲಮ್ಮನ ಬೆಳವಡಿ
ಈಚೆಗೆ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಗ್ರಾಮದ ಹೊಲಗಳಿಗೆ ತಹಸೀಲ್ದಾರ್ ಸದಾಶಿವ ಮಕ್ಕೊಜಿ, ಗ್ರಾಮ ಆಡಳಿತಾಧಿಕಾರಿ ವೀರೇಶ ಪಾಟೀಲ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದ ಅಪಾರ ನೀರು ನುಗ್ಗಿ ಹಾನಿಯಾದ ಬಿತ್ತನೆ ಪ್ರದೇಶ ಹಾಗೂ ಒಡ್ಡುಗಳ ಒಡೆದಿರುವುದನ್ನು ವೀಕ್ಷಿಸಿದ ಅಧಿಕಾರಿಗಳು ಮಳೆ ಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು.
ರೈತ ಮಂಜುನಾಥ ತಹಸೀಲ್ದಾರ್ ಮಾತನಾಡಿ, ಸಾಲ ಮಾಡಿ ದುಬಾರಿ ಬೀಜ-ಗೊಬ್ಬರ ಖರೀದಿಸಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿಯೇ ಪ್ರಕತಿ ವಿಕೋಪದಿಂದ ಬಿತ್ತನೆ ಸಂಪೂರ್ಣ ಹುಸಿಹೋಗಿದೆ. ಸರ್ಕಾರ ಮರು ಬಿತ್ತನೆಗಾಗಿ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಮಳೆಯಿಂದ ಹಾನಿಗೊಳಗಾದ ರೈತರಿಗೆ ಶೀಘ್ರವೇ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿ ರೈತರು ತಹಸೀಲ್ದಾರ್ ಸದಾಶಿವ ಮಕ್ಕೊಜಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಸೀಲ್ದಾರ್, ಮಳೆಯಿಂದ ಬಿತ್ತನೆ ಹಾನಿಯಾಗಿರುವ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ರೈತರಾದ ರವಿ ಸಿದ್ದಣ್ಣವರ, ಯಲ್ಲಪ್ಪ ಜಕಾತಿ, ಮುತ್ತು ಕಾಳೆ, ರವಿ ಕುಂಬಾರ, ಈರಪ್ಪ ತುರಾಯಿ, ಮಲ್ಲಪ್ಪ ತಳವಾರ, ಪಕೀರಪ್ಪ ರೊಡಸಿ ಇತರರಿದ್ದರು.