ಸೋಮವಾರಪೇಟೆ:
ಕಾಂಗ್ರೆಸ್ ಪಕ್ಷದ ಎಸ್‌ಸಿ ಮತ್ತು ಎಸ್‌ಟಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಈ ಬಾರಿ ಪಕ್ಷದಲ್ಲಿ ಆಯ್ಕೆ ಮಾಡಲಿರುವ ವಿವಿಧ ಸಮಿತಿಗಳ ಪಟ್ಟಿಯಲ್ಲಿ ಎಸ್‌ಸಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಸುಜಿತ್, ಈ ಬಾರಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಎಸ್‌ಸಿ ಸಮುದಾಯದವರಿಗೆ ನೀಡಬೇಕು. ಬೂತ್ ಮಟ್ಟದಿಂದ ಜಿಲ್ಲಾ ಅಧ್ಯಕ್ಷ ಸ್ಥಾನದವರೆಗೂ ದಲಿತ ಸಮುದಾಯದವರಿಗೆ ಸಮಾನ ಸ್ಥಾನಮಾನ ಕಲ್ಪಿಸಬೇಕು. ಸಮುದಾಯದವರು ಪಕ್ಷಕ್ಕೆ ಸೀಮಿತವಾಗದೆ, ಯುವಕರನ್ನು ಸದೃಢರನ್ನಾಗಿ ಮಾಡಲು ಸೂಕ್ತ ಸ್ಥಾನಮಾನ ಹಾಗೂ ಜವಾಬ್ದಾರಿ ನೀಡುವುದು ಅಗತ್ಯ ಎಂದು ಹೇಳಿದರು.
ಟಿ.ಇ.ಸುರೇಶ್ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 45 ಸಾವಿರಕ್ಕೂ ಅಧಿಕ ಎಸ್‌ಸಿ ಮತಗಳಿದ್ದು, ಶೇ.90 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿವೆ. ಹೀಗಿರುವಾಗ ದಲಿತ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರು ಹಾಗೂ ಜಿಲ್ಲಾ ಮುಖಂಡರು ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಸಮುದಾಯವನ್ನು ರಾಜಕೀಯವಾಗಿ ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಎಸ್‌ಸಿ ಘಟಕದ ಜಿಲ್ಲಾ ಅಧ್ಯಕ್ಷ ಬಿ.ಇ. ಜಯೇಂದ್ರ ಮಾತನಾಡಿ, ಈ ಬಾರಿ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಎಸ್‌ಸಿ ಸಮುದಾಯದವರಿಗೆ ನೀಡುವುದಾಗಿ ಪಕ್ಷದ ಪ್ರಮುಖ ಮುಖಂಡರು ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರುವ ವಿಶ್ವಾಸವಿದೆ. ಉಳಿದ ಅನುಷ್ಠಾನ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೂ ನಮ್ಮ ಸಮುದಾಯದವರಿಗೆ ಅವಕಾಶ ಕಲ್ಪಿಸುವಂತೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದರು. ಸಭೆಯಲ್ಲಿ ಪಕ್ಷದ ಮುಖಂಡರಾದ ಮೋಹನ್ ಮೌರ್ಯ, ಮಹೇಶ್, ವೇದಕುಮಾರ್, ಮಂಜುನಾಥ್, ರಾಜಪ್ಪ ಇತರರು ಇದ್ದರು.