- ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್
- ಕವಿ ಪತ್ನಿ ದಿನಾಚರಣೆ
- ‘ಎಂ.ಎನ್. ವ್ಯಾಸರಾವ್ ಅವರ ಪತ್ನಿ ಸಾವಿತ್ರಿ ಅವರಿಗೆ ನಿನ್ನೊಲಿಮೆಯಿಂದಲೆ ಗೌರವ ಪುರಸ್ಕಾರ ಪ್ರದಾನ
ಬೆಂಗಳೂರು: ನಗು ಮತ್ತು ಸಂಗೀತ ವಿಶ್ವಭಾಷೆಯಾಗಿದ್ದು, ಈ ಎರಡಕ್ಕೂ ವೈದ್ಯಕೀಯ ಮೌಲ್ಯವಿದೆ. ಯಾವುದೇ ಭಾಷೆಯಲ್ಲಿ ನೋಡಿದರೂ ಸಂಗೀತ ಮತ್ತು ನಗುವಿಗೆ ಗಡಿಯೇ ಇಲ್ಲ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವನಗುಡಿಯಲ್ಲಿರುವ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕವಿ ಪತ್ನಿ ದಿನಾಚರಣೆಯಲ್ಲಿ ‘ಎಂ.ಎನ್. ವ್ಯಾಸರಾವ್ ಅವರ ಪತ್ನಿ ಸಾವಿತ್ರಿ ಅವರಿಗೆ ನಿನ್ನೊಲಿಮೆಯಿಂದಲೆ ಗೌರವ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಹೆರಿಗೆ ನೋವನ್ನ ಮರೆಸಲು ಆಸ್ಪತ್ರೆಯ ಹೆರಿಗೆ ವಾರ್ಡ್‌ಗಳಲ್ಲಿ ದಿನದ 24 ಗಂಟೆಯೂ ಲಘು ಸಂಗೀತವಿರುತ್ತದೆ. ಮ್ಯೂಸಿಕಲ್ ಥೆರಪಿ ಕೂಡ ಮಾಡಲಾಗುತ್ತದೆ. ಹಾಗೆಯೇ ನಗು ಕೂಡ ತನ್ನದೇ ಮೌಲ್ಯವನ್ನು ಹೊಂದಿದೆ ಎಂದರು.
ಮತ್ತೊಂದು ಪ್ರಮುಖ ವಿಚಾರವೆಂದರೆ, ಇಂದಿನ ದಿನಮಾನಗಳಲ್ಲಿ ಸಂಪತ್ತಿಗಿಂತ ಸರಳತೆ ಬ್ರ್ಯಾಂಡ್ ಆಗಬೇಕಿದೆ. ದುಂದುವೆಚ್ಚದ ಬಟ್ಟೆ, ಶೂಗಳನ್ನು ಧರಿಸುವುದಕ್ಕಿಂತ ಸರಳತೆಯನ್ನೇ ಬ್ರ್ಯಾಂಡ್ ಆಗಿಸಬೇಕು ಎಂದು ಹೇಳಿದರು.
ಕನ್ನಡ ಕಣ್ಣಾಗಲಿ
ಕನ್ನಡಿಗರಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಕನ್ನಡವನ್ನೇ ಮಾತನಾಡಿ. ವ್ಯಾವಹಾರಿಕ ದೃಷ್ಟಿಯಿಂದ ಇಂಗ್ಲಿಷ್ ಸೇರಿ ಹಲವಾರು ಭಾಷೆಗಳನ್ನು ಕಲಿತರೂ ಮನೆಗಳಲ್ಲಿ ಕನ್ನಡ ಮಾತನಾಡಿದಾಗ ಕನ್ನಡ ಉಳಿಯಲಿದೆ. ‘ಕನ್ನಡ ಕನ್ನಡಕವಾಗದೆ, ಕನ್ನಡ ಕಣ್ಣಾಗಲಿ’ ಎಂದು ಕಿವಿಮಾತು ಹೇಳಿದರು.
ಕಿಕ್ಕೇರಿಯಲ್ಲಿ ಕೆಎಸ್‌ನ ಸ್ಮಾರಕ
ಟ್ರಸ್ಟ್ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಕೆ.ಎಸ್.ನಗರಸಿಂಹಸ್ವಾಮಿ ಅವರ ಹುಟ್ಟೂರು ಕಿಕ್ಕೇರಿಯಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ‘ಭಾರತದಲ್ಲಿ ನಾ’ ಎಂದು ಹೆಸರಿಡಲಾಗುತ್ತಿದೆ. ಶೀಘ್ರವೇ ಸ್ಮಾರಕ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ದೇಶದಲ್ಲಿ ಕವಿ ಹಾಗೂ ಕವಯಿತ್ರಿ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾರೆ. ಆದರೆ, ಕವಿ ಪತ್ನಿ ಹೆಸರಿನಲ್ಲಿ ಎಲ್ಲಿಯೂ ಪ್ರಶಸ್ತಿ ನೀಡುವುದಿಲ್ಲ. ಕವಿಯನ್ನಾಗಿಸುವಲ್ಲಿ ಅವರ ಪತ್ನಿಯ ಕೊಡುಗೆ ಕೂಡ ಇರುತ್ತದೆ. ಇದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕವಿ ಬಿ.ಆರ್. ಲಕ್ಷ್ಮಣರಾವ್ ಹಾಗೂ ಸಿ. ಅಶ್ವತ್ಥ ಅವರ ಪತ್ನಿ ಚಂದ್ರ ಉಪಸ್ಥಿತರಿದ್ದರು.
"
ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ಅವರೇಕಾಯಿ ಉಪ್ಪಿಟ್ಟು ಮತ್ತು ನುಚ್ಚಿನುಂಡೇ ಎಂದರೆ ಬಹಳ ಇಷ್ಟ. ಕೆಎಸ್‌ನ ಅವರ ಮನೆಗೆ ಹೋಗುವ ಸಮಯದಲ್ಲಿ ವ್ಯಾಸರಾವ್ ಅವರು ತೆಗೆದುಕೊಂಡು ಹೋಗುತ್ತಿದ್ದರು. ಕೆಎಸ್‌ನ ತುಂಬಾ ಸರಳ ಸ್ವಭಾವದ ವ್ಯಕ್ತಿಯಾಗಿದ್ದರು.
— - ಸಾವಿತ್ರಿ ವ್ಯಾಸರಾವ್