Kidwai Cancer hospital  
ರಾಜ್ಯ

ಭವಿಷ್ಯದ ಪೀಳಿಗೆಗೆ ಪರಿಸರ ಉಳಿಸಿ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಟಿ. ನವೀನ್ ಕರೆ
  • * ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು: ಜಲ ಸಂರಕ್ಷಣೆ, ವೃಕ್ಷಾರೋಪಣ ಹಾಗೂ ಪರಿಸರಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದ ಪೀಳಿಗೆಗೆ ಹಸಿರು ಮತ್ತು ಸಮೃದ್ಧ ಭೂಮಿಯನ್ನು ಉಳಿಸಬೇಕಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಟಿ. ನವೀನ್ ಹೇಳಿದ್ದಾರೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆವರಣದಲ್ಲಿ ಶುಕ್ರವಾರ ಸಸಿಗಳನ್ನು ನೆಡುವ ಮೂಲಕ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸಸಿಗಳು ಹೆಚ್ಚಾಗಿ ನೆಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮನೆಗೊಂದು ಮರವಿದ್ದರೆ ಆರೋಗ್ಯಕರ ಜೀವನ ಸಾಧ್ಯ. ಈ ನಿಟ್ಟಿನಲ್ಲಿ ಕಿದ್ವಾಯಿ ಸಂಸ್ಥೆಯ ಆವರಣದಲ್ಲಿ ಹಸಿರು ವಾತಾವರಣ ನಿರ್ಮಾಣಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಸ್ಥೆಯ ಆವರಣದಲ್ಲಿ ಪ್ರತಿವರ್ಷವೂ ಸಸಿಗಳ ನೆಡುವ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. 23 ಎಕರೆ ವ್ಯಾಪ್ತಿಯನ್ನು ಹೊಂದಿರುವ ಈ ಸಂಸ್ಥೆ ರೋಗಿಗಳಿಗೆ ಮಾನಸಿಕ ನೆಮ್ಮದಿ ಮತ್ತು ಮನೆಯ ವಾತಾವರಣ ಕಲ್ಪಿಸಲು 30 ಸಾವಿರಕ್ಕೂ ಹೆಚ್ಚು ಸಸ್ಯ ಪ್ರಬೇಧಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಹಸಿರು ವಾತಾವರಣ ವೃದ್ಧಿಸಲಾಗಿದೆ ಎಂದು ತಿಳಿಸಿದರು.
ಪರಿಸರ ಪ್ರಶಸ್ತಿ ಪಡೆದ ಆಸ್ಪತ್ರೆ:
ದೇಶದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಅತಿ ಹೆಚ್ಚು ಸಸ್ಯ ಸಂಕುಲ ಹೊಂದಿರುವ ಆಸ್ಪತ್ರೆಯಾಗಿದ್ದು, ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ರಾಜ್ಯ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ವತಿಯಿಂದ 2022-23ನೇ ಸಾಲಿನ ‘ರಾಜ್ಯ ಪರಿಸರ ಪ್ರಶಸ್ತಿ’ಗೆ ಭಾಜನವಾಗಿದೆ ಎಂದು ಹೇಳಿದರು.
ವೃಕ್ಷಾರೋಪಣ ಕಾರ್ಯಕ್ರಮ ಅಂಗವಾಗಿ ಆಸ್ಪತ್ರೆ ಆವರಣದಲ್ಲಿ ನೂರು ಸಸಿಗಳನ್ನು ನೆಡಲಾಯಿತು. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.