ಪೈಪ್ಲೈನ್ ಕಟ್ ಮಾಡಿರುವದನ್ನು ಖಂಡಿಸಿ ಆಳಂದ ತಾಲೂಕಿನ ಹಡಲಗಿಯಿಂದ ಅರ್ಜುಣಗಿವರೆಗೆ ಕಲಬುರಗಿ&ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
- ಆರ್.ಕೆ.ಪಾಟೀಲ್ ಎಚ್ಚರಿಕೆ
- ಹಡಲಗಿಯಿಂದ ಅರ್ಜುಣಗಿವರೆಗೂ ಪಾದಯಾತ್ರೆ
ಆಳಂದ: ಬೋರಿ ನದಿಯಿಂದ ಅಮರ್ಜಾ ಜಲಾಶಯಲ್ಲೆ ನೀರು ತುಂಬುವ ಮಹಾತ್ವಾಕಾಂಕ್ಷಿ ಯೋಜನೆಯ ಪೈಪ್ಲೈನ್ ಒಡೆದು ಹಾಳು ಮಾಡಿರುವು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿ ಕೃತ್ಯ ಖಂಡಿಸಿ ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ರೈತರು ಹಡಲಗಿಯಿಂದ ಅರ್ಜುಣಗಿವರೆಗೆ ಗುರುವಾರ ಪಾದಯಾತ್ರೆ ನಡೆಸಿದರು.
ಮಹತ್ವದ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜಲಾಶಯಕ್ಕೆ ನೀರು ಬರಬೇಕಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಪೈಪ್ಲೈನ್ ಕಟ್ ಮಾಡಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳಿಗೆ ಪೈಪ್ಲೈನ್ ದುರಸ್ತಿ ಮಾಡುವುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರು ನಾಲ್ಕು ಪತ್ರ ಬರೆದಿದ್ದಾರೆ. ಈವರೆಗೂ ಸ್ಪಂದಿಸಿಲ್ಲ. ಹೀಗಾಗಿ ಹೋರಾಟಕ್ಕೆ ಇಳಿದಿದ್ದೇವೆ. ಈ ಯೋಜನೆಯಿಂದ ಅಫಜಲಪುರ ತಾಲೂಕಿನ 10 ಕೆರೆಗಳು ತುಂಬಲಾಗುತ್ತಿದೆ. ಇದೀಗ ಸಮಸ್ಯೆ ಉಂಟಾಗಿದ್ದು, ಕೂಡಲೇ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದರೆ ಸತ್ಯಾಗ್ರಹ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಅಶೋಕ ಸವಳೇಶ್ವರ, ಗುರುಶಾಂತಪ್ಪ ಪಾಟೀಲ್, ಶರಣಬಸಪ್ಪ ಭೂಸನೂರ, ಈರಣ್ಣ ಝಳಕಿ, ರೇವಣಸಿದ್ದಪ್ಪ ನಾಗೂರ, ಆದಿನಾಥ ಹೀರಾ, ಸಿದ್ದರಾಮ ಪ್ಯಾಟಿ, ಬಾಬು ಗೊಬ್ಬುರ, ವೀರೇಂದ್ರ ಶೇಗಜಿ, ಶ್ರೀಮಂತ ವಾಗ್ದರ್ಗಿ, ಬಸವರಾಜ ಆಳಂದ, ಈರಣ್ಣ ಹತ್ತರಕಿ, ಲಿಂಗರಾಜ ಪಾಟೀಲ್, ಆಲೂ ಗೌಡ ಪಾಟೀಲ್, ಶಿವಕಿರಣ ಪಾಟೀಲ್ ಇತರರಿದ್ದರು.
ಪಿಎಸ್ಐ ಇಂದೂಮತಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.