- ಶನಿವಾರದ ಶಾಲಾ ಸಮಯವನ್ನು ಬದಲಾವಣೆ ಮಾಡಿದ್ದು, ರಾಜ್ಯಾದ್ಯಂತ ಒಂದೇ ಸಮಯವನ್ನು ಪಾಲನೆ ಮಾಡುವಂತೆ ಸುಚನೆ
- ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ಕ್ಕೆ ನಿಗದಿ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರಾಮಾಗಿ ಶಾಲೆಗಳಿಗೆ ಆಗಮಿಸಲು ಅನುಕೂಲ
- ಪ್ರಸ್ತುತ ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಬೇರೆ ಶಾಲಾ ಸಮಯವನ್ನು ಪಾಲನೆ ಮಾಡಲಾಗುತ್ತಿದೆ.
ಬೆಂಗಳೂರು: ಶನಿವಾರದ ತರಗತಿಗಳಿಗೆ ಬೆಳ್ಳಂಬೆಳಗ್ಗೆಯೇ ಎದ್ದೇಳಬೇಕು ಎಂಬ ಬೇಜಾರಿನಲ್ಲಿದ್ದ ಶಾಲಾ ಶಿಕ್ಷಕರು ಮತ್ತು ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆಯು ಖುಷಿಯ ಸುದ್ದಿಯನ್ನು ನೀಡಿದೆ.
ಶನಿವಾರದ ಶಾಲಾ ಸಮಯವನ್ನು ಬದಲಾವಣೆ ಮಾಡಿದ್ದು, ರಾಜ್ಯಾದ್ಯಂತ ಒಂದೇ ಸಮಯವನ್ನು ಪಾಲನೆ ಮಾಡುವಂತೆ ಸುಚನೆ ನೀಡಿದ್ದು, ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ಕ್ಕೆ ನಿಗದಿ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರಾಮಾಗಿ ಶಾಲೆಗಳಿಗೆ ಆಗಮಿಸಲು ಅನುಕೂಲ ಮಾಡಿಕೊಟ್ಟಿದೆ.
ಪ್ರಸ್ತುತ ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಬೇರೆ ಶಾಲಾ ಸಮಯವನ್ನು ಪಾಲನೆ ಮಾಡಲಾಗುತ್ತಿದೆ. ಕೆಲವಡೆ ಬೆಳಗ್ಗೆ 8ರಿಂದ 12 ಗಂಟೆ, 7.30ರಿಂದ 11.30.... ಹಲವು ಸಮಯವನ್ನು ಪಾಲಿಸಲಾಗುತ್ತಿದೆ. ಇದರ ಬದಲಾಗಿ ರಾಜ್ಯಾದ್ಯಂತ ಒಂದೇ ಸಮಯವನ್ನು ಪಾಲನೆ ಮಾಡಬೇಕು ಎಂಬ ಉದ್ದೇಶದಿಂದ ಹೊಸ ನಿಯಮವನ್ನು ರೂಪಿಸಲಾಗಿದೆ. ಪಾಲಿಸಲು ಅನುಕೂಲವಾಗುವಂತೆ ಸಮಯವನ್ನು ನಿಗದಿ ಮಾಡಲಾಗಿದೆ.
ಆನ್‌ಲೈನ್ ಹಾಜರಾತಿ ಕಾರಣ:
ಇನ್ನು ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ಕರ್ತವ್ಯ ಆನ್‌ಲೈನ್ ಹಾಜರಾತಿಯಿಂದಲೂ ಹೊಸ ನಿಯಮ ರೂಪಿಸಲು ಪರೋಕ್ಷ ಕಾರಣವಾಗಿದೆ ಎನ್ನಲಾಗುತ್ತಿದೆ. ಶನಿವಾರದಂದು 8 ಗಂಟೆಗೆ ಶಾಲಾ ಸಮಯವಿದ್ದು, ಶಿಕ್ಷಕರು ಒಂದು ವೇಳೆ ತಡವಾಗಿ ಕರ್ತವ್ಯಕ್ಕೆ ಹಾಜರಾಗಿದ್ದರೆ, ಸಮಸ್ಯೆಯಾಗುತ್ತಿತ್ತು. ಬೆಳಗ್ಗೆ 8.30 ಸಮಯವಾದರೆ, ಎಲ್ಲರಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸಾರಿಗೆಯನ್ನೇ ನಂಬಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಸಹ ಬಂದಿದ್ದವು. ಈ ಎಲ್ಲ ಕಾರಣಗಳಿಂದ ಶನಿವಾರದ ಸಮಯವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
"
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ಹಾಗೂ ರಾಜ್ಯಾದ್ಯಂತ ಒಂದೇ ಸಮಯವನ್ನು ಪಾಲನೆ ಮಾಡಬೇಕೆಂಬ ಉದ್ದೇಶದಿಂದ ಶನಿವಾರದ ಸಮಯವನ್ನು ನಿಗದಿ ಮಾಡಲಾಗಿದೆ.
— - ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ