ಆಳಂದನ ಶಾಲೆಯೊಂದರಲ್ಲಿ ಎಸ್​ಎಟಿಎಸ್​ ತಂತ್ರಾಂಶದಲ್ಲಿ ಟಿಸಿ ಪಡೆಯುವ ವೇಳೆ ಎದುರಾಗಿಸುವ ಸಮಸ್ಯೆ. 
ರಾಜ್ಯ

ಟಿಸಿ ವಿತರಣೆಗೆ ಎಸ್​ಎಟಿಎಸ್​ ತೊಡಕು

ಪ್ರಮುಖ ಮುಖ್ಯಾಂಶಗಳು

  • ತಾಂತ್ರಿಕ ದೋಷದಿಂದ ಸಕಾಲಕ್ಕೆ ಸಿಗದ ವರ್ಗಾವಣೆ ಪ್ರಮಾಣಪತ್ರ
  • ಮಕ್ಕಳು, ಪಾಲಕರ ಪರದಾಟ
ಆಳಂದ: ರಾಜ್ಯ ಸರ್ಕಾರ ಶೈಣಿಕ ದಾಖಲೆಗಳ ಡಿಜಿಟಲೀಕರಣ ಉದ್ದೇಶದಿಂದ ಜಾರಿಗೆ ತಂದಿರುವ ಸ್ಟೂಡೆಂಟ್​ ಅಚೀವಮೆಂಟ್​ ಟ್ರ್ಯಾಕಿಂಗ್​ ಸಿಸ್ಟಮ್​ (ಎಸ್​ಎಟಿಎಸ್​) ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಗಳಿಂದ ವರ್ಗಾವಣೆ ಪ್ರಮಾಣಪತ್ರ (ಟಿಸಿ) ವಿತರಣೆಗೆ ತೀವ್ರ ತೊಂದರೆ ಎದುರಾಗಿದೆ.
ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 70, ಸರ್ಕಾರಿ ಪ್ರೌಢಶಾಲೆ 37, ಅನುದಾನಸಹಿತ ಪ್ರೌಢಶಾಲೆ 11 ಹಾಗೂ 19 ಅನುದಾನರಹಿತ ಪ್ರಾಥಮಿಕ ಶಾಲೆಗಳಿವೆ. ತಂತ್ರಾಂಶ ದೋಷದಿಂದಾಗಿ 1&7 ಹಾಗೂ 8&9ನೇ ತರಗತಿಗಳ ವರ್ಗಾವಣೆ ಪ್ರಮಾಣಪತ್ರ ಸಿಗದೆ ಪರದಾಡುವಂತಾಗಿದೆ. ಮುರಾರ್ಜಿ ದೇಸಾಯಿ, ಡಾ.ಬಿ.ಆರ್​. ಅಂಬೇಡ್ಕರ್​, ಇಂದಿರಾ ಗಾಂಧಿ ಸೇರಿ ವಿವಿಧ ವಸತಿಶಾಲೆಗಳಿಗೆ ಆಯ್ಕೆಯಾದ ಮಕ್ಕಳು ಪ್ರವೇಶ ಪಡೆಯಲು ಟಿಸಿ ದಾಖಲೆ ಕಡ್ಡಾಯ. ಆದರೆ ಎಸ್​ಎಟಿಎಸ್​ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ದಾಖಲಿಸುವ ವೇಳೆ ತಾಂತ್ರಿಕ ದೋಷ, ಸರ್ವರ್​ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತಿವೆ.
ಈ ಹಿಂದೆ ಶಾಲಾ ಹಂತದಲ್ಲೆ ಟಿಸಿ ವಿತರಿಸುವ ವ್ಯವಸ್ಥೆ ಇದ್ದುದ್ದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆ ಆಗುತ್ತಿರಲಿಲ್ಲ. ಆದರೀಗ ಸಂಪೂರ್ಣ ಆನ್​ಲೈನ್​ ವ್ಯವಸ್ಥೆ ಜಾರಿಯಾಗಿದ್ದರಿಂದ ಸಾಫ್ಟ್​ವೇರ್​ನಲ್ಲಿ ಸಣ್ಣ ಸಮಸ್ಯೆ ಎದುರಾದರೂ ಸಂಪೂರ್ಣ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿದೆ. ಇದರಿಂದ ಒಂದೇ ದಿನದಲ್ಲಿ ಮುಗಿಯಬೇಕಿದ್ದ ಕೆಲಸ ಹಲವು ದಿನಗಳವರೆಗೆ ಸಾಗುತ್ತಿದೆ. ಹೊಸ ಶೈಣಿಕ ವರ್ಷ ಆರಂಭವಾಗಿ ತಿಂಗಳಾಗಿದ್ದರೂ ಅನೇಕರಿಗೆ ಟಿಸಿ ದೊರೆಯದ ಕಾರಣ ಪ್ರವೇಶ ವಿಳಂಬವಾಗುತ್ತಿದ್ದು, ವಿದ್ಯಾರ್ಥಿ ಮತ್ತು ಪಾಲಕರು ಶಾಲೆಗಳಿಗೆ ಅಲೆದಾಡುವಂತಾಗಿದೆ.
ತಂತ್ರಾಂಶ ದೋಷದಿಂದ ಯಾವುದೇ ಕೆಲಸ ಆಗದಿದ್ದರೂ ಅದರ ಹೊಣೆಗಾರಿಕೆಯನ್ನು ಶಿಕರು ಮತ್ತು ಮುಖ್ಯ ಶಿಕರೇ ಹೊರಬೇಕಾಗಿದೆ. ಪಾಲಕರ ಆಕ್ರೋಶ, ಮೇಲಧಿಕಾರಿಗಳ ಒತ್ತಡ ಹಾಗೂ ವಿದ್ಯಾರ್ಥಿ ಸಮಸ್ಯೆಗಳ ನಡುವೆ ಶಾಲಾ ಸಿಬ್ಬಂದಿ ಅನಗತ್ಯ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಸಮಸ್ಯೆ ನಮ್ಮಿಂದಲ್ಲ, ತಂತ್ರಾಂಶದಲ್ಲಿದೆ ಎಂದು ತಿಳಿಸಿದರೂ ಪಾಲಕರ ಅಸಮಾಧಾನ ಕಡಿಮೆಯಾಗುತ್ತಿಲ್ಲ ಎಂದು ಶಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ತಂತ್ರಾಂಶ ಸಮಸ್ಯೆಯಿಂದ ಮಕ್ಕಳ ಶೈಣಿಕ ಭವಿಷ್ಯಕ್ಕೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಶಿಣ ಇಲಾಖೆ ತಣ ಕ್ರಮ ಕೈಗೊಂಡು ಎಸ್​ಎಟಿಎಸ್​ ದೋಷ ಸರಿಪಡಿಸಬೇಕು. ಟಿಸಿ ವಿತರಣೆ ತ್ವರಿತಗೊಳಿಸಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಸುಗಮವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಪಾಲಕರು ಹಾಗೂ ಶಿಣ ತರ ಒತ್ತಾಸೆಯಾಗಿದೆ.
ಪ್ರಾಥಮಿಕ ಶಾಲೆಯದ್ದೇ ಸಮಸ್ಯೆ
ಸರ್ಕಾರ ಪ್ರಸಕ್ತ ವರ್ಷವೇ ಎಸ್​ಎಟಿಎಸ್​ ತಂತ್ರಾಂಶ ಜಾರಿಗೊಳಿಸಿದೆ. ಆದರೆ ನೆಲಮಟ್ಟದಲ್ಲಿ ತಾಂತ್ರಿಕ ದೋಷಗಳು ನಿರಂತರ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಮೂಲ ಉದ್ದೇಶಕ್ಕೆ ಹೊಡೆತ ಬೀಳುತ್ತಿದೆ. ಆಳಂದ ತಾಲೂಕಿನಲ್ಲಿ ಪ್ರೌಢಶಾಲೆ ವಿಭಾಗಕ್ಕೆ ತಂತ್ರಾಂಶ ಸರಿಯಾಗಿ ಹೊಂದಿಕೆಯಾಗಿದೆ. ಆದರೆ ಪ್ರಾಥಮಿಕ ಶಾಲೆ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. 5, 6, 7ನೇ ತರಗತಿ ಮಕ್ಕಳು ಬೇರೆಡೆ ಹೋಗಬೇಕಾದರೆ ಟಿಸಿ ಸಿಗದೆ ಪರದಾಡುವಂತಾಗಿದೆ.
"

ಕೇವಲ ಆಳಂದನಲ್ಲಿ ಎಸ್​ಎಟಿಎಸ್​ ಸಾಫ್ಟ್​ವೇರ್​ ಸಮಸ್ಯೆ ಎದುರಾಗಿಲ್ಲ, ರಾಜ್ಯಾದ್ಯಂತ ಇದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣಪತ್ರ ನೀಡುವ ಕಾರ್ಯಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

— > ಅಣ್ಣಪ್ಪ ಹಾದಿಮನಿ ಬಿಆರ್​ಸಿ, ಆಳಂದ