DK Shivakumar 
ರಾಜ್ಯ

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನಿದೆ: DK ಶಿವಕುಮಾರ್

ಬೆಳಗಾವಿ: ಒಟ್ಟಿಗೆ ಸೇರಿ ಊಟ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ? ನನಗೇಕೆ ಅದೆಲ್ಲಾ? ಹೊರಗಡೆಯಿಂದ ಬಂದಿದ್ದೀವಿ. ಎಲ್ಲಾ ಸೇರಿರೋದ್ರಲ್ಲಿ, ಊಟ ಮಾಡೋದ್ರಲ್ಲಿ ತಪ್ಪೇನಿದೆ?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮರುಪ್ರಶ್ನಿಸಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ನಡೆದಿದೆಯಲ್ಲ ಎಂದು ಕೇಳಿದಾಗ ಡಿಸಿಎಂ ಈ ರೀತಿ ಉತ್ತರಿಸಿದರು. ಎಲ್ಲ ಸೇರಿ ಊಟ ಮಾಡೋದ್ರಲ್ಲಿ ತಪ್ಪು ಹುಡುಕಬೇಡಿ. "ಅದು ನನಗ್ಯಾಕೆ ಬೇಕು. ನನ್ನನ್ಯಾಕೆ ಈ ಪ್ರಶ್ನೆ ಕೇಳ್ತೀರಿ" ಎಂದು ಮರು ಪ್ರಶ್ನಿಸಿದರು.

ಕಾಲವೇ ಉತ್ತರ ನೀಡುತ್ತೆ

ನಿಮ್ಮನ್ನು ಭ್ರಷ್ಟಾಚಾರದ ಪಿತಾಮಹ ಎಂದು ವಿಜಯೇಂದ್ರ ಕರೆದಿರುವ ಬಗ್ಗೆ ಕೇಳಿದಾಗ, "ವಿಜಯೇಂದ್ರ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡೋಣ. ಹೈಕಮಾಂಡ್ ಗೆ ನಾವು ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಇದನ್ನು ಅವರು ಸಾಬೀತು ಮಾಡಬೇಕು. ಯಾವ ಲೆಕ್ಕಾಚಾರದ ಮೇಲೆ ಅವರು ಆರೋಪ ಮಾಡಿದ್ದಾರೆ. ಇಲ್ಲಿ ಸರಕಾರನಾ ನಾವು ದಿವಾಳಿ ಮಾಡಿ ದುಡ್ಡು ತೆಗೆದುಕೊಂಡು ಹೋಗಿ ಹೈಕಮಾಂಡ್ ಗೆ ಕೊಡುತ್ತಿದ್ದೇವೆ, ನಾವು ಹೈ ಕಮಾಂಡ್ ಗೆ ಎಟಿಎಂ ಎಂದು ಹೇಳಿದ್ದಾರೆ. ಈಗ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಉಳಿದ ಉತ್ತರಕ್ಕೆ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಏನು ಬೇಕೋ ಆ ಉತ್ತರ ಈಗಾಗಲೇ ನೀಡಿದ್ದೇನೆ" ಎಂದರು.

ರಾಜೇಂದ್ರ ಪ್ರಸಾದ್ ಆರೋಗ್ಯವಾಗಿದ್ದಾರೆ

ತಮ್ಮ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರ ಕಾರು ಅಪಘಾತದ ಬಗ್ಗೆ ಕೇಳಿದಾಗ, "ರಾಜೇಂದ್ರ ಪ್ರಸಾದ್ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ಯಾವುದೇ ಆತಂಕ ಪಡಬೇಕಿಲ್ಲ. ಕತ್ತಿನ ಬಳಿ ನೋವಿದೆ. ಒಂದೆರಡು ದಿನ ವಿಶ್ರಾಂತಿ ಬೇಕು ಎಂದು ಹೇಳಿದ್ದಾರೆ. ತೀವ್ರ ತೆರನಾದ ತೊಂದರೆ ಉಂಟಾಗಿಲ್ಲ. ದೇವಿ ಯಲ್ಲಮ್ಮನೇ ಕಾಪಾಡಿದ್ದಾಳೆ" ಎಂದರು.