ಬೆಂಗಳೂರು : ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ (ಎಸ್‌ಎನ್‌ಪಿಎಸ್‌ಯು) ಗೂಗಲ್ ಕ್ಲೌಡ್ ಜೊತೆ ಎಐ ಏಜೆಂಟಿಕ್ ಪ್ರೋಗ್ರಾಂ ಪರಿಚಯಿಸುವ ಸಂಬಂಧ ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿದೆ.
ಉನ್ನತ ಶಿಕ್ಷಣದಲ್ಲಿ ಉದಯೋನ್ಮುಖ ಎಐ ತಂತ್ರಜ್ಞಾನವನ್ನು ತರುವ ಸಂಸ್ಥೆಯ ಪ್ರಯತ್ನಕ್ಕೆ ಇದು ಮಹತ್ವದ ಹೆಜ್ಜೆಯಾಗಿದ್ದು, ಗೂಗಲ್ ಕ್ಲೌಡ್ ಜೊತೆಗಿನ ಸಹಯೋಗದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಏಜೆಂಟಿಕ್ ಎಐ ಪ್ರೋಗ್ರಾಂ ಉಪಕ್ರಮವನ್ನು ಆರಂಭಿಸುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲು ಎಂದು ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ ಹೇಳಿಕೊಂಡಿದೆ.
ಈ ಸಂದರ್ಭದಲ್ಲಿ ಗೂಗಲ್ ಎಐ ಜಿಟಿಎಂ, ಇಂಡಿಯಾ ಹೆಡ್ ಶನೂಪ್ ಮಾತನಾಡಿ, ತಂತ್ರಜ್ಞಾನ ಚಾಲಿತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಸಹಯೋಗವು ವಿಶಾಲವಾದ ದೃಷ್ಟಿಕೋನವಾಗಿದೆ. ಪ್ರಗತಿಪರ ಸಂಸ್ಥೆಗಳು ತಮ್ಮ ಶೈಕ್ಷಣಿಕ ಕಲಿಕೆಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚುತ್ತಿರುವ ಎಐ-ಚಾಲಿತ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಈ ಉಪಕ್ರಮವು ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.
ಎಸ್‌ಎನ್‌ಪಿಎಸ್‌ಯು ಸಹಕುಲಾಧಿಪತಿ ಜಿ.ಡಿ.ಮನೋಜ್ ಮಾತನಾಡಿ, ಎಐ ಅನ್ನು ಕೇವಲ ಉದ್ಯೋಗದ ಮೇಲಿನ ಅದರ ಪರಿಣಾಮದ ದೃಷ್ಟಿಯಿಂದ ಮಾತ್ರವಲ್ಲದೆ, ಮನುಷ್ಯನ ಸಾಮರ್ಥ್ಯವನ್ನು ವಿಸ್ತರಿಸುವ ಬಲವಾದ ಸಾಧನವಾಗಿ ನೋಡುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಎಐ ಅನ್ನು ಅರ್ಥ ಮಾಡಿಕೊಳ್ಳಲು, ಅದನ್ನು ಜವಾಬ್ದಾರಿಯುತವಾಗಿ ಬಳಸಲು ಮತ್ತು ಸಮಾಜಕ್ಕಾಗಿ ಅರ್ಥಪೂರ್ಣ ಪರಿಹಾರಗಳನ್ನು ಸೃಷ್ಟಿಸಲು ಶೈಕ್ಷಣಿಕ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಎಸ್‌ಎನ್‌ಪಿಎಸ್‌ಯು ರಿಜಿಸ್ಟ್ರಾರ್ ಡಾ.ಎಚ್.ರಾಮಕೃಷ್ಣ, ಮಾರ್ಕೆಟಿಂಗ್ ನಿರ್ದೇಶಕ ಡಾ. ಎಚ್.ಪಿ.ಪ್ರಶಾಂತ್ ಕುಮಾರ್, ಪ್ರವೇಶಾತಿ ನಿರ್ದೇಶಕ ಕೆ.ಆರ್. ಶಶಾಂಕ್, ಪರೀಕ್ಷಾಂಗ ಕುಲಸಚಿವ ಡಾ.ಎ.ಎಮ್.ನಾಗರಾಜ, ಡೀನ್ ಡಾ. ಮಹೇಂದ್ರಬಾಬು, ಎಸ್‌ಎನ್‌ಪಿಎಸ್‌ಯು ಟೆಕ್ ಪಾಲುದಾರಿಕೆಗಳ ಒಎಸ್‌ಡಿ ದೇಶಮುಖ್ ಓಂಕಾರ, ಗೂಗಲ್ನ ನವಿಶಾ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.
ಸಂಶೋಧನೆ, ರೋಗನಿರ್ಣಯ, ಬೋಧನೆ ಮತ್ತು ಕಲಿಕೆಯಂತಹ ಕ್ಷೇತ್ರಗಳಲ್ಲಿ ಎಐ ಅನ್ವಯಿಸುವುದು, ಬೋಧನಾ ಸಿಬ್ಬಂದಿಗಳ ಬೆಳವಣಿಗೆ, ವಿದ್ಯಾರ್ಥಿಗಳ ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಏಕಕಾಲದಲ್ಲಿ ಬಲಪಡಿಸುವ ಜೊತೆಗೆ, ಪಠ್ಯಕ್ರಮದೊಳಗೆ ಎಐ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಪಾಲುದಾರಿಕೆ ಗೂಗಲ್ ಕ್ಲೌಡ್, ಗೂಗಲ್ ಫಾರ್ ಎಜುಕೇಷನ್ ಮತ್ತು ಗೂಗಲ್ ಎಐ ಪರಿಣತಿಯನ್ನು ಒಟ್ಟುಗೂಡಿಸಲಿದೆ.ಡಾ.ವಿ. ಜಯಂತಿ, ಎಸ್‌ಎನ್‌ಪಿಎಸ್‌ಯು ಉಪಕುಲಪತಿ