ಕಿತ್ತೂರು ನಾಡಿನ ಸ್ವಾತಂತ್ರ್ಯದ ಅಗ್ನಿದಿವ್ಯ ಸಂಗೊಳ್ಳಿ ರಾಯಣ್ಣ 
ರಾಜ್ಯ

ಕಿತ್ತೂರು ನಾಡಿನ ಸ್ವಾತಂತ್ರ್ಯದ ಅಗ್ನಿದಿವ್ಯ ಸಂಗೊಳ್ಳಿ ರಾಯಣ್ಣ: ತಾಯ್ನೆಲಕ್ಕಾಗಿ ನೇಣಿಗೇರಿದ ಕ್ರಾಂತಿವೀರನ ಜನ್ಮದಿನ ಇಂದು

ಪ್ರಮುಖ ಮುಖ್ಯಾಂಶಗಳು

  • ಬ್ರಿಟಿಷರನ್ನು ನಡುಗಿಸಿದ್ದ ಗಂಡುಗಲಿ
  • ತಾಯ್ನೆಲಕ್ಕಾಗಿ ನೇಣಿಗೇರಿದ ಕ್ರಾಂತಿವೀರನ ಜನ್ಮದಿನ ಇಂದು

| ಚನ್ನಬಸಪ್ಪ ರೊಟ್ಟಿ, ಬೆಳಗಾವಿ

‘ಹುಲಿಯು ಹುಟ್ಟಿತ್ತೋ ಕಿತ್ತೂರು ನಾಡಾಗ... ಶೂರ ಸಂಗೊಳ್ಳಿ ರಾಯಣ್ಣನ ಹೆಸರಾಗ...’ ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಆಂಗ್ಲರ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿದ್ದ ರಾಯಣ್ಣನ ಹಿರಿಮೆಯನ್ನು ಹಾಡಿಹೊಗಳುವ ಈ ಲಾವಣಿ ಇಂದಿಗೂ ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ತಾಯ್ನೆಲಕ್ಕಾಗಿ ನಗುನಗುತ್ತಲೇ ನೇಣಿಗೇರಿ ಹುತಾತ್ಮನಾದ ಕೆಚ್ಚೆದೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನವನ್ನು ನೆನೆದರೆ ಕಣ್ಣಾಲಿಗಳು ತುಂಬಿಬರುತ್ತವೆ. ಭಾರತಾಂಬೆಗೆ ಸ್ವಾತಂತ್ರ್ಯ ಸಿಕ್ಕ ಸುದಿನವೇ (ಆ.15) ರಾಯಣ್ಣನ ಜನ್ಮದಿನವಾಗಿರುವುದು ಅವರ ದೇಶಭಕ್ತಿಗೆ ಸಂದ ನೈಜ ಗೌರವವಾಗಿದೆ.

1795ರ ಆಗಸ್ಟ್ 15ರಂದು ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಕೆಂಚವ್ವ, ಬರಮಪ್ಪ ರೋಗಣ್ಣವರ ದಂಪತಿ ಪುತ್ರನಾಗಿ ರಾಯಣ್ಣ ಜನಿಸಿದರು. ಇವರ ಅಜ್ಜ ರಾಗಪ್ಪ ಚಿಣಗಿ-ಕೋವಾಡ್ ಕಾಳಗದಲ್ಲಿ ವೈರಿಗಳ ವಿರುದ್ಧ ತೋರಿದ ಸಾಹಸಕ್ಕಾಗಿ ಕಿತ್ತೂರು ದೊರೆ ಮಲ್ಲಸರ್ಜನಿಂದ ‘ಸಾವಿರ ಒಂಟೆಗಳ ಸರದಾರ’ ಎಂಬ ಬಿರುದು ಪಡೆದಿದ್ದರು. ಆತನ ತಂದೆ ಬರಮಪ್ಪ ಊರಿಗೆ ಕಂಟಕವಾಗಿದ್ದ ಹೆಬ್ಬುಲಿಯನ್ನೇ ಕೊಂದ ಮಗಧೀರನಾಗಿದ್ದರು. ಈ ಶೌರ್ಯ, ಕೆಚ್ಚು ರಾಯಣ್ಣನಲ್ಲಿ ರಕ್ತಗತವಾಗಿ ಬಂದಿತ್ತು. ಆರಂಭದಲ್ಲಿ ಮನೆತನದ ಸಾಂಪ್ರದಾಯಿಕ ವೃತ್ತಿ ವಾಲಿಕಾರಿಕೆ ಕೆಲಸ ಮಾಡುತ್ತಿದ್ದ ರಾಯಣ್ಣ, ತದನಂತರ ಕಿತ್ತೂರು ಸಂಸ್ಥಾನದ ಸೇವೆಗೆ ಸೇರಿದರು.

ಸ್ವಾಭಿಮಾನದ ಕಿಚ್ಚು: ಕಿತ್ತೂರು ಸಂಸ್ಥಾನದೊಂದಿಗೆ ನಡೆದ ಮೊದಲ ಕಾಳಗದಲ್ಲಿ ಧಾರವಾಡದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಹತನಾದ ನಂತರ ಕಿತ್ತೂರಿನ ಮೇಲೆ ದಾಳಿ ಮಾಡಿದ ಬ್ರಿಟಿಷರು ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ರಾಯಣ್ಣ ಹಾಗೂ ಆತನ ಸಂಗಡಿಗರನ್ನು ಬಂಧಿಸಿದರು. ರಾಣಿ ಚನ್ನಮ್ಮಾಜಿ ನಿಧನದ ನಂತರ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಕಾನೂನಿನಡಿ ಬ್ರಿಟಿಷ್ ಸರ್ಕಾರ ಕಿತ್ತೂರು ಸಂಸ್ಥಾನ ಕಬಳಿಸಲು ಮುಂದಾದಾಗ ರೊಚ್ಚಿಗೆದ್ದ ರಾಯಣ್ಣ ಜೈಲಿನಿಂದ ಪರಾರಿಯಾಗಿ ಬ್ರಿಟಿಷರನ್ನು ಬಗ್ಗುಬಡಿಯಲು ನಿರ್ಧರಿಸಿದರು. ‘ಕಿತ್ತೂರು ನಮ್ಮದು, ಬ್ರಿಟಿಷರು ನಮ್ಮ ನಾಡು ಬಿಟ್ಟು ತೊಲಗಬೇಕು’ ಎಂದು ಗುಡುಗಿದರು. ಬೆಂಕಿ-ಬಿರುಗಾಳಿಯಾಗಿ ಆಂಗ್ಲರೊಡನೆ ಹೋರಾಡಿದರು.

ಗೆರಿಲ್ಲಾ ಯುದ್ಧತಂತ್ರ: ನಿಗೂಢವಾಗಿದ್ದುಕೊಂಡೇ ಬ್ರಿಟಿಷರ ಹೆಡೆಮುರಿ ಕಟ್ಟಲು ನಿರ್ಧರಿಸಿ ತನ್ನ ಸಹಚರರಾದ ಬಿಚ್ಚುಗತ್ತಿ ಚನ್ನಬಸ್ಸು, ವಡ್ಡರ ಯಲ್ಲಣ್ಣ, ಹಬಸಿ ರಾಮ, ಹೊಗರ್ತಿ ಭರಮ್ಯಾ ಮುಂತಾದವರ ಜತೆಗೂಡಿ ಹಂಡಿ ಬಡಗನಾಥನ ಗುಡ್ಡದಲ್ಲಿ ನೆಲೆಗೊಂಡು ಗೆರಿಲ್ಲಾ ದಾಳಿ ಮೂಲಕ ಬ್ರಿಟಿಷರನ್ನು ನಡುಗಿಸಿದವರು ರಾಯಣ್ಣ. 1825ರಿಂದ 1830ರ ಅವಧಿಯಲ್ಲಿ ರಾಯಣ್ಣ ಹಾಗೂ ಆತನ ಸಂಗಡಿಗರು ಸಂಪಗಾವಿ, ಬೀಡಿ, ಜಕ್ಕನಾಯಕನ ಕೊಪ್ಪ, ಮರಕಟ್ಟಿ, ಖಾನಾಪುರದಲ್ಲಿದ್ದ ಬ್ರಿಟಿಷ್ ಚಾವಡಿಗಳ ಮೇಲೆ ದಾಳಿ ನಡೆಸಿ, ಬ್ರಿಟಿಷ್ ಖಜಾನೆಯಲ್ಲಿದ್ದ ಹಣ ಕೈವಶಪಡಿಸಿಕೊಂಡು ಅದರ ನೆರವಿನಿಂದ ಸೈನ್ಯ ಕಟ್ಟಿದರು. ಕಿತ್ತೂರು ಹಾಗೂ ಹಳಿಯಾದಲ್ಲಿದ್ದ ಬ್ರಿಟಿಷರ ಪ್ರಾದೇಶಿಕ ಕಚೇರಿಗಳ ಮೇಲೆ ದಾಳಿ ನಡೆಸಿ, ಅಲ್ಲಿದ್ದ ದಾಖಲೆಗಳನ್ನು ಸುಟ್ಟುಹಾಕಿದರು. ಇಟಗಿ, ಪಾರಿಶ್ವಾಡ, ಬಡಾಲ ಅಂಕಲಗಿ, ನಂದಗಡ ಸೇರಿ ಹಲವು ಗ್ರಾಮಗಳ ರೈತರು, ಯುವಕರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅಣಿಗೊಳಿಸಿದರು.

ಬೆದರಿದ್ದ ಬ್ರಿಟಿಷರು: ದಾಳಿಗಳಿಂದ ವಿಚಲಿತರಾದ ಬ್ರಿಟಿಷರು ರಾಯಣ್ಣನನ್ನು ‘ಲೂಟಿಕೋರ’ ಎಂದು ಬಿಂಬಿಸಲು ಪ್ರಯತ್ನಿಸಿದರೂ, ರಾಯಣ್ಣನ ದಾಳಿಗಳು ಅತ್ಯಂತ ಯೋಜಿತವಾಗಿದ್ದವು. ಅವು ವೈಯಕ್ತಿಕ ಸ್ವಾರ್ಥಕ್ಕಾಗಿ ನಡೆಸಿದ ದಾಳಿಗಳಾಗಿರಲಿಲ್ಲ, ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸುಸಂಘಟಿತ ಹೋರಾಟಗಳಾಗಿದ್ದವು. ರಾಯಣ್ಣನ ಹೋರಾಟ ಬ್ರಿ್ರಷರನ್ನು ನಡುಗಿಸಿತ್ತು ಎಂಬುದಕ್ಕೆ ಆಗ ಬ್ರಿಟಿಷ್ ಅಧಿಕಾರಿಗಳು ನಡೆಸಿದ ಪತ್ರವ್ಯವಹಾರಗಳು ಸಾಕ್ಷಿಯಾಗಿವೆ.

ಮೋಸದಿಂದ ಸೆರೆ: ತಮ್ಮ ಆಳ್ವಿಕೆಗೆ ಕಂಟಕನಾಗಿದ್ದ ರಾಯಣ್ಣನನ್ನು ನೇರವಾಗಿ ಸೆರೆಹಿಡಿಯಲಾಗದು ಎಂದರಿತ ಬ್ರಿಟಿಷರು, ಲಾವಣಿಯಲ್ಲಿರುವ ‘ನೇಗಿನಹಾಳದ ನಿಂಗನಗೌಡ ಖೋದಾನಪುರದ ಇನಾಮದಾರ ಮಲಪುರಿ ಹೊಳೆಯಲಿ ಮೋಸದಿ ಅವರು ವೀರ ರಾಯಣ್ಣನ ಹಿಡಿಸಿದರು’ ಎಂಬ ಉಲ್ಲೇಖದಂತೆ ಆತನ ಆಪ್ತರಿಗೆ ಜಹಗೀರಿನ ಆಮಿಷವೊಡ್ಡಿ ವಂಚನೆಯಿಂದ ಸೆರೆಹಿಡಿದರು. ನಂತರ ಏಕಮುಖ ವಿಚಾರಣೆ ನಡೆಸಿ, ರಾಯಣ್ಣ ಹಾಗೂ ಆತನ ಸಹಚರರರಾದ ಬಾಳಾ ನಾಯಕ, ಬಸಲಿಂಗಪ್ಪ, ಕರಬಸಪ್ಪ, ಭೀಮಾ ಜಿಡ್ಡಿಮನಿ, ಕೆಂಚಪ್ಪ, ಅಪ್ಪೋಜಿ ನಾಯಕರನ್ನು ನಂದಗಡದಲ್ಲಿರುವ ಆಲದ ಮರದಡಿ ಸಾಮೂಹಿಕವಾಗಿ ಗಲ್ಲಿಗೇರಿಸಿದರು. ಗಲ್ಲಿಗೇರುವ ಸಂದರ್ಭದಲ್ಲೂ ‘ನಾ ಈ ನಾಡನ್ಯಾಗ ಮತ್ತ ಹುಟ್ಟಿ ಬರ್ತೆನಿ, ಕೆಂಪ ಮೊಸಡಿಯ ಬ್ರಿಟಿಷರನ ಒದ್ದ ಓಡಸ್ತೀನಿ’ ಎಂಬುದು ರಾಯಣ್ಣನ ವೀರ ನುಡಿಯಾಗಿತ್ತು!

ರಾಯಣ್ಣನಂಥ ಮಗ ಹುಟ್ಟಲೆಂದು ಹರಕೆ

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡದಲ್ಲಿ ರಾಯಣ್ಣನ ಸಮಾಧಿ ಇದ್ದು, ಅಲ್ಲಿ ಬೆಳೆದಿರುವ ಆಲದ ಮರವನ್ನು ಇಂದಿಗೂ ಪೂಜಿಸ ಲಾಗುತ್ತದೆ. ‘ರಾಯಣ್ಣನಂಥ ಶೂರ ಮಗ ಹುಟ್ಟಲಿ’ ಎಂಬ ಹರಕೆ ಹೊತ್ತು ಆ ಮರಕ್ಕೆ ತೊಟ್ಟಿಲು ಕಟ್ಟಲಾಗುತ್ತದೆ.