- ಇದು ರಾಹುಲ್ ಗಾಂಧಿ ಅವರ ಕನಸಿನ ಯೋಜನೆಯಾಗಿದ್ದು, ಪಕ್ಷವನ್ನು ಬುಡಮಟ್ಟದಿಂದ ಸದೃಢಗೊಳಿಸಿ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ
- ಮುಂದಿನ ದಿನಗಳಲ್ಲಿ ಬ್ಲಾಕ್ ಹಾಗೂ ಬೂತ್ ಮಟ್ಟದ ಸಂಘಟನೆಯ ಬಲವರ್ಧನೆಗೂ ವಿಸ್ತರಿಸಲಾಗುತ್ತದೆ
ಎಐಸಿಸಿ ಅಹಮದಾಬಾದ್ ಮಹಾಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದ ಸಂಘಟನ್ ಸೃಜನ್ ಅಭಿಯಾನ ರಾಜ್ಯದಲ್ಲಿಯೂ ಆರಂಭವಾಗಿದ್ದು, ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಮತ್ತು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ರಾಹುಲ್ ಗಾಂಧಿ ಅವರ ಕನಸಿನ ಯೋಜನೆಯಾಗಿದ್ದು, ಪಕ್ಷವನ್ನು ಬುಡಮಟ್ಟದಿಂದ ಸದೃಢಗೊಳಿಸಿ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.
ಪ್ರತಿ ಜಿಲ್ಲೆಗೆ ತಟಸ್ಥ ವೀಕ್ಷಕರನ್ನು ನೇಮಿಸಿ, ಯಾವುದೇ ಒತ್ತಡವಿಲ್ಲದೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಈ ಅಭಿಯಾನ ಡಿಸಿಸಿ ಅಧ್ಯಕ್ಷರ ಆಯ್ಕೆಗೆ ಮಾತ್ರ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಬ್ಲಾಕ್ ಹಾಗೂ ಬೂತ್ ಮಟ್ಟದ ಸಂಘಟನೆಯ ಬಲವರ್ಧನೆಗೂ ವಿಸ್ತರಿಸಲಾಗುತ್ತದೆ ಎಂದರು.
ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು, 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರಿದ್ದಾರೆ. ಉಳಿದ ಎರಡು ಕ್ಷೇತ್ರಗಳಲ್ಲಿ ಅಲ್ಪ ಅಂತರದಿಂದ ಸೋಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಸಂಘಟನೆ ಬಲಪಡಿಸಲಾಗುತ್ತಿದೆ.
ಶುಕ್ರವಾರದಿಂದ ಶಾಂತಿನಗರ, ಶಿವಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.
ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ಆರು ಸದಸ್ಯರ ಪ್ಯಾನಲ್ ಸಿದ್ಧಪಡಿಸಿ ಎಐಸಿಸಿಗೆ ಕಳುಹಿಸಲಾಗುತ್ತದೆ. ಈ ಪ್ಯಾನಲ್‌ನಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಯುವಕರು ಸೇರಿದಂತೆ ವಿವಿಧ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗುತ್ತದೆ. ಡಿಸಿಸಿ ಅಧ್ಯಕ್ಷರ ಆಯ್ಕೆ ಮಾತ್ರವಲ್ಲದೆ, ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಜವಾಬ್ದಾರಿ ನಿರ್ವಹಿಸಬಲ್ಲ ನಾಯಕರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಸಂಘಟನಾ ಸೃಜನ್ ಅಭಿಯಾನದ ಬೆಂಗಳೂರು ಕೇಂದ್ರ ಜಿಲ್ಲಾ ಉಸ್ತುವಾರಿ ಜ್ಯೋತಿಕುಮಾರ್ ಮಾತನಾಡಿ, ಆ.18ರೊಳಗೆ ಅಭಿಪ್ರಾಯ ಸಂಗ್ರಹ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಹೊಸ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎಂದರು.
ವೀಕ್ಷಕರ ಮುಂದೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಹುದು. ಅಗತ್ಯವಿದ್ದರೆ ಬ್ಲಾಕ್ ಮಟ್ಟಕ್ಕೂ ತೆರಳಿ ಕಾರ್ಯಕರ್ತರೊಂದಿಗೆ ನೇರ ಸಂವಾದ ನಡೆಸಲಾಗುವುದು. ಇದು ಸಂಪೂರ್ಣವಾಗಿ ಪಕ್ಷದ ಸಂಘಟನಾ ಪ್ರಕ್ರಿಯೆಯಾಗಿದ್ದು, ಸರ್ಕಾರದ ವಿಚಾರಗಳನ್ನು ಇಲ್ಲಿ ಚರ್ಚಿಸುವುದಿಲ್ಲ ಎಂದರು.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಅಹಮದಾಬಾದ್ ಎಐಸಿಸಿ ಮಹಾಸಭೆಯ ತೀರ್ಮಾನದಂತೆ ದೇಶವ್ಯಾಪಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಈ ಅಭಿಯಾನ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ರಾಮಚಂದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ನಾಗರಾಜ ಹಾಗೂ ಪದಾಧಿಕಾರಿಗಳಾದ ಅಮರೇಶ್ ಪಾಪಣ್ಣ, ಮುರುಗಣ್ಣ, ಮದನ್ ಪಟೇಲ್, ಸತ್ಯಣ್ಣ, ನವೀನ್, ಕಾರ್ತಿ ಮತ್ತು ಶೇಖರ್ ಉಪಸ್ಥಿತರಿದ್ದರು.
*ಸಂಘಟನಾ ಸೃಜನ್ ಅಭಿಯಾನದ ಬೆಂಗಳೂರು ಕೇಂದ್ರ ಜಿಲ್ಲಾ ಉಸ್ತುವಾರಿ ಜ್ಯೋತಿಕುಮಾರ್ ಮಾತನಾಡಿ, ಆ.18ರೊಳಗೆ ಅಭಿಪ್ರಾಯ ಸಂಗ್ರಹ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಹೊಸ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ.
-ಕಿಯೋನಿಕ್ಸ್ ಅಧ್ಯಕ್ಷ ಮತ್ತು ಶಾಸಕ ಶರತ್ ಬಚ್ಚೇಗೌಡ