Sandhya Kirana Scheme  
ರಾಜ್ಯ

ನಿವೃತ್ತ ಪಿಂಚಣಿದಾರರಿಗೆ ‘ಸಂಧ್ಯಾ ಕಿರಣ’

ಪ್ರಮುಖ ಮುಖ್ಯಾಂಶಗಳು

  • * ನೋಂದಣಿಗೆ ಮೂರು ತಿಂಗಳು ಅವಧಿ
ಬೆಂಗಳೂರು: 70 ವರ್ಷದೊಳಗಿನ ಸರ್ಕಾರಿ ನಿವೃತ್ತ ನೌಕರ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅವಲಂಬಿತ ಮಕ್ಕಳಿಗೆ ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿ, ಆದೇಶ ಹೊರಡಿಸಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ನಗದುರಹಿತ ಸೇವೆ ಒದಗಿಸಲಾಗುತ್ತದೆ. ಇದಕ್ಕಾಗಿ ಚಿಕಿತ್ಸಾ ವೆಚ್ಚದಲ್ಲಿ ಫಲಾನುಭವಿಗಳ ವಂತಿಕೆಯಿಂದ ಶೇ.70 ಮತ್ತು ರಾಜ್ಯ ಸರ್ಕಾರದ ಪಾಲಿನಿಂದ ಶೇ.30 ಭರಿಸಲಾಗುತ್ತದೆ.
ಪಿಂಚಣಿದಾರರು ಮೂಲ ಪಿಂಚಣಿಯ ಶೇ.1.25 ಹಾಗೂ ಕುಟುಂಬ ಪಿಂಚಣಿದಾರರು ಶೇ.0.75 ವಂತಿಕೆಯಿಂದ ಪಡೆದು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಜಮಾ ಮಾಡಲಾಗುವುದು. ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಪಕ ನಿರ್ವಹಣೆ ಖಚಿತಪಡಿಸಿಕೊಳ್ಳಲು, ಕಾರ್ಪಸ್ ಬಳಕೆ ಪ್ರಮಾಣವು ಶೇ.85ಕ್ಕಿಂತ ಅಧಿಕವಿದ್ದರೆ ವಂತಿಕೆ ದರವನ್ನು ಶೇ.0.05 ಸ್ವಯಂಚಾಲಿತವಾಗಿ ಹೆಚ್ಚಿಸುವ ಬಗ್ಗೆಯೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ (ಎಬಿ-ಎಆರ್‌ಕೆ)ಯ ನಿಯಮಗಳಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಮೂಲಕ ಯೋಜನೆ ಜಾರಿಯಾಗಲಿದೆ. ಯೋಜನೆಗೆ ವಂತಿಕೆ ನೀಡಲು ಇಚ್ಛಿಸುವ, ಈಗಾಗಲೇ ನಿವೃತ್ತರಾಗಿರುವ ಪಿಂಚಣಿದಾರರ ನೋಂದಣಿಗೆ ಮೂರು ತಿಂಗಳು ನಿಗದಿಪಡಿಸಲಾಗಿದೆ. ನಂತರ ನಿವೃತ್ತಿಯಾಗುವ ಪಿಂಚಣಿದಾರರು ನಿವೃತ್ತಿಯ ದಿನಾಂಕದಿಂದ ಎರಡು ತಿಂಗಳೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರು ಸೌಲಭ್ಯ ಪಡೆಯಲು ಅನರ್ಹರಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.