Arogya soudha  
ರಾಜ್ಯ

ದತ್ತಾಂಶ ಸಂಗ್ರಹಕ್ಕೆ ‘ಸಮಸ್ತ ’ ಡಿಜಿಟಲ್ ವೇದಿಕೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಆರೋಗ್ಯ ಇಲಾಖೆ ಆದೇಶ
  • * ಆಶಾ, ಆರೋಗ್ಯ ಕಾರ್ಯಕರ್ತರಿಗೆ ಅನುಕೂಲ

ಬೆಂಗಳೂರು: ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರು ಕ್ಷೇತ್ರ ಮಟ್ಟದಲ್ಲಿ ದತ್ತಾಂಶ ಸಂಗ್ರಹಿಸಲು ‘ಸಮಸ್ತ’ ಡಿಜಿಟಲ್ ವೇದಿಕೆಯನ್ನು ಜಾರಿಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದಾರೆ. ಅವರಿಂದ ಸದ್ಯ ಕೈಬರಹದ ಮೂಲಕ ದತ್ತಾಂಶಗಳನ್ನು ನಮೂದಿಸಲಾಗುತ್ತಿದೆ. ಆದರೆ ಈ ಕೈಬರಹದ ದಾಖಲಾತಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ದತ್ತಾಂಶದ ನಿಖರತೆ, ಲಭ್ಯತೆ ಹಾಗೂ ವಿಶ್ಲೇಷಣೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿ ಪೋರ್ಟಲ್‌ಗಳ ಮೂಲಕ ದತ್ತಾಂಶಗಳ ಸಂಗ್ರಹ ನಡೆಯುತ್ತಿದ್ದರೂ, ಕೈಬರಹ ಆಧಾರಿತ ನಮೂದು ವಿಧಾನದಲ್ಲಿ ದತ್ತಾಂಶದ ಗುಣಮಟ್ಟ ಕುಸಿಯುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಪರಿಹರಿಸಲು, ಮೂಲಸ್ಥಾನದಲ್ಲಿಯೇ ದತ್ತಾಂಶವನ್ನು ಡಿಜಿಟಲೀಕರಣಗೊಳಿಸಲು ನೂತನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಲ್ಲಿ ಆಶಾ ಡೈರಿಯಲ್ಲಿರುವ 485 ಅಂಶಗಳನ್ನು ಸರಳೀಕರಿಸಿ 134 ಪ್ರಮುಖ ದತ್ತಾಂಶ ಅಂಶಗಳಿಗೆ ಇಳಿಸಲಾಗಿದೆ. ಪುನರಾವರ್ತಿತ ಅಂಶಗಳನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ಶೇ.75 ಕಾರ್ಯಭಾರ ಇಳಿಕೆಯಾಗಲಿದೆ. ಈ ವ್ಯವಸ್ಥೆಯು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಅಲ್ಲಿ ಶೇ.95 ಫಲಾನುಭವಿಗಳ ನೋಂದಣಿಯಾಗಿದೆ. ದತ್ತಾಂಶದ ನಿಖರತೆ ಹಾಗೂ ಕಾರ್ಯಕ್ಷಮತೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದ ಕಾರಣ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಿ, ಹಂತ ಹಂತವಾಗಿ ಸಮಸ್ತ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ದತ್ತಾಂಶ ಭದ್ರತೆ ಮತ್ತು ಗೌಪ್ಯತೆ ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಹಾಗೂ ಎಲ್ಲ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಹಂತ ಹಂತವಾಗಿ ಇದನ್ನು ಅನುಷ್ಠಾನಗೊಳಿಸಬೇಕೆಂದು ಆದೇಶದಲ್ಲಿ ತಿಳಿಸಿದೆ.