ರಾಜ್ಯ

ವಾಹನ ಮಾಲೀಕರ ಡೇಟಾ ಸೇಲ್! ಸಾರಥಿ, ವಾಹನ್ ಪೋರ್ಟಲ್​ಗಳಲ್ಲಿರುವ ವಿವರಗಳು ಸೋರಿಕೆ; ಕೇವಲ 5 ರೂ. ಕೊಟ್ಟರೆ ಗಾಡಿ ಓನರ್​ಗಳ ಎಲ್ಲ ವಿವರಗಳು ಲಭ್ಯ

ಕೀರ್ತಿನಾರಾಯಣ ಸಿ. ಬೆಂಗಳೂರು

ದೇಶದಲ್ಲಿ ಸೈಬರ್ ವಂಚಕರ ಹಾವಳಿ ದಿನೇದಿನೆ ಹೆಚ್ಚುತ್ತಿರುವ ಬೆನ್ನಲ್ಲೇ ಅತ್ಯಂತ ಗೌಪ್ಯವಾಗಿರಬೇಕಾದ ಜನರ ವೈಯಕ್ತಿಕ ವಿವರಗಳು ಆನ್​ಲೈನ್ ವೇದಿಕೆಗಳಲ್ಲಿ ಸುಲಭವಾಗಿ ಸಿಗುತ್ತಿರುವ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಟೆಲಿಗ್ರಾಂನಂತಹ ಆನ್​ಲೈನ್ ವೇದಿಕೆಗಳಲ್ಲಿ ವಾಹನ ಮಾಲೀಕರ ಸಂಪೂರ್ಣ ಮಾಹಿತಿ ಬರೀ 5 ರೂ.ಗೆ ಮಾರಾಟವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ದೇಶದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ನಡೆಯುವ ವಾಹನ ನೋಂದಣಿ (ಆರ್​ಸಿ), ಡ್ರೖೆವಿಂಗ್ ಲೈಸೆನ್ಸ್ (ಡಿಎಲ್), ಇ-ಚಲನ್ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (ಪಿಯುಸಿಸಿ) ಸೇರಿ ಅತಿಸೂಕ್ಷ್ಮ ವೈಯಕ್ತಿಕ ವಿವರಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರಥಿ ಮತ್ತು ವಾಹನ್ ಪೋರ್ಟಲ್​ಗಳಲ್ಲಿ ದಾಖಲಾಗುತ್ತವೆ. ಈ ಪ್ರಮುಖ ದಾಖಲಾತಿಗಳೇ ಸೋರಿಕೆಯಾಗಿ, ಟೆಲಿಗ್ರಾಂ ಸೇರಿ ಕೆಲ ಖಾಸಗಿ ಆನ್​ಲೈನ್ ವೇದಿಕೆಗಳಲ್ಲಿ ದೊರೆಯುತ್ತಿವೆ. ಈ ವಿಷಯವನ್ನು ಇಂಟರ್ನೆಟ್ ಫ್ರೀಡಂ ಫೌಂಡೇಷನ್ (ಐಎಫ್​ಎಫ್) ಸಂಸ್ಥೆ ಬಯಲಿಗೆಳೆದಿದೆ.

ಡಿಜಿಟಲ್ ಅರೆಸ್ಟ್, ನವೀಕರಣ, ಹ್ಯಾಕಿಂಗ್​ನಂತಹ ಹಲವು ಮಾದರಿಗಳಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಸೈಬರ್ ಖದೀಮರ ಕೈಗೆ ಸುಲಭವಾಗಿ ವೈಯಕ್ತಿಕ ವಿವರಗಳು ಸಿಕ್ಕರೆ ಮುಂದೇನು ಎಂಬ ಭಯ ಶುರುವಾಗಿದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾರಥಿ

ಹಾಗೂ ವಾಹನ್ ಪೋರ್ಟಲ್​ಗಳ ವಿಧಿವಿಜ್ಞಾನ (ಎಫ್​ಎಸ್​ಎಲ್) ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ವರದಿ ಕೊಡುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (ಸಿಇಆರ್​ಟಿ-ಇನ್) ಜವಾಬ್ದಾರಿಯನ್ನು ವಹಿಸಲಾಗಿದೆ.

ವಿವರ ಸೋರಿಕೆ ಬಗ್ಗೆ ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿ ಹಲವು ರಾಜ್ಯಗಳ ಸಾರಿಗೆ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಟೆಲಿಗ್ರಾಂ ಚಾನಲ್​ನಲ್ಲಿ 5 ರೂ. ಪಾವತಿಸಿದರೆ ವಾಹನ ಮಾಲೀಕರ ವೈಯಕ್ತಿಕ ಮಾಹಿತಿ ಪಡೆಯಬಹುದು. ಅದೇ ರೀತಿ ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ವೆಹಿಕಲ್ ಇನ್​ಫಾರ್ವೆಷನ್ ಆಪ್​ನಲ್ಲಿ 29 ರೂ. ಪಾವತಿಸಿದರೆ 15 ಬಾರಿ ಮಾಹಿತಿಯನ್ನು ಸರ್ಚ್ ಮಾಡಲು ಅವಕಾಶ ಕೊಟ್ಟಿರುವುದು ಪತ್ತೆಯಾಗಿದೆ. ಬರೀ ವಾಹನದ ನಂಬರ್ ಪ್ಲೇಟ್​ನಲ್ಲಿರುವ ಸಂಖ್ಯೆಯನ್ನು ನಮೂದಿಸಿದರೆ ಒಟಿಪಿ ಸೇರಿ ಇನ್ನಾವುದೇ ರೀತಿಯ ಅಧಿಕೃತ ದಾಖಲಾತಿ ಒದಗಿಸದಿದ್ದರೂ ನೋಂದಣಿ ವೇಳೆ ಕೊಟ್ಟಿರುವ ಎಲ್ಲ ವಿವರಗಳನ್ನು ಬಹಿರಂಗಪಡಿಸುತ್ತದೆ.

ಲೀಕ್ ಹೇಗೆ?

  • ಸಾರಿಗೆ ಇಲಾಖೆಯ ಪೋರ್ಟಲ್​ಗಳನ್ನು ಹ್ಯಾಕ್ ಮಾಡಿ ಮಾಹಿತಿ ಪಡೆದಿಲ್ಲ

  • ಥರ್ಡ್ ಪಾರ್ಟಿ ಏಜೆನ್ಸಿಗಳಿಂದ ಸರ್ಕಾರದ ಅಧಿಕೃತ ಮಾಹಿತಿ ಬಹಿರಂಗ

  • ಪೋರ್ಟಲ್ ನಿರ್ವಹಣೆ ಹೊಣೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ) ಹೊತ್ತಿದೆ

  • ಕೆವೈಸಿ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ಎನ್​ಐಸಿಯೇ ವಿತರಣೆ ಮಾಡಿದೆ

  • ಮಧ್ಯವರ್ತಿಗಳ ಮುಖೇನ ವೈಯಕ್ತಿಕ ವಿವರಗಳನ್ನು ಮಾರಾಟ ಮಾಡಲಾಗಿದೆ

  • 25,314 ಖಾಸಗಿ ಸಂಸ್ಥೆಗಳು, ಡೇಟಾಬೇಸ್ ಪ್ರವೇಶಿಸಲು ಅನುಮತಿ ಪಡೆದಿದ್ದವು

  • 2026ರ ಅ.1ರಿಂದ ಡಾಟಾಬೇಸ್ ಅನುಮತಿ ಸ್ಥಗಿತಗೊಳಿಸಿರುವ ಎನ್​ಐಸಿ

ಏನೆಲ್ಲ ಮಾಹಿತಿ ಸೋರಿಕೆ?

  1. ಆಪ್​ನಲ್ಲಿ ಬರೀ ವಾಹನ ನೋಂದಣಿ ಸಂಖ್ಯೆ ನಮೂದಿಸಿದರೆ ಸಾಕು

  2. ಯಾವುದೇ ಒಟಿಪಿಯೂ ಆಗತ್ಯವಿಲ್ಲದೆ ಎಲ್ಲ ವಿವರಗಳು ಲಭಿಸುತ್ತವೆ

  3. ವಾಹನ ಮಾಲೀಕರ ಪೂರ್ಣ ಹೆಸರು, ತಂದೆಯ ಹೆಸರುಗಳು ಸಿಗುತ್ತೆ

  4. ಪಿನ್​ಕೋಡ್ ಸಮೇತ ಪ್ರಸ್ತುತ ಮತ್ತು ಶಾಶ್ವತ ವಿಳಾಸಗಳು ದೊರೆಯುತ್ತೆ

  5. ವಾಹನ ನೋಂದಣಿ ವೇಳೆ ಕೊಟ್ಟಿರುವ ಮೊಬೈಲ್ ಸಂಖ್ಯೆಯು ಸಿಗುತ್ತೆ

  6. ಡಿಎಲ್ ವಿವರ, ಚಲನ್ ಇತಿಹಾಸ, ಫಾಸ್ಟ್​ಟ್ಯಾಗ್ ಮಾಹಿತಿಯು ಲಭ್ಯ

ಗೂಗಲ್​ಗೂ ಸೂಚನೆ

ವಾಹನಗಳ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುವ ಎಲ್ಲ ಆಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆರವುಗೊಳಿಸುವಂತೆ ಗೂಗಲ್ ಸಂಸ್ಥೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಕೊಟ್ಟಿದೆ. ಈ ನಿಟ್ಟಿನಲ್ಲಿ ಸಿಇಆರ್​ಟಿ-ಇನ್ ಕೂಡ ಕಾರ್ಯಾಚರಣೆ ಆರಂಭಿಸಿದೆ.

ಯಾವ ಪೋರ್ಟಲ್​ನಲ್ಲಿ ಏನು?

ವಾಹನ್: ವಾಹನಗಳ ನೋಂದಣಿ ದಾಖಲಾತಿಗಳ ನಿರ್ವಹಣೆ

ಸಾರಥಿ: ವಾಹನ ಚಾಲನಾ ಪರವಾನಗಿ ಮತ್ತು ಸಂಬಂಧಿತ ಸೇವೆ ನಿರ್ವಹಣೆ

ಇ-ಚಲನ್: ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡಗಳ ಮಾಹಿತಿ

ಪಿಯುಸಿಸಿ: ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳ ನಿರ್ವಹಣೆ

ಸೈಬರ್ ಪೊಲೀಸರ ಸಲಹೆ ಏನು?

ಹೆಸರು, ವಿಳಾಸ ಮತ್ತು ವಾಹನದ ಸಂಖ್ಯೆ ತಿಳಿದು ಕರೆ ಮಾಡುವ ಸಾಧ್ಯತೆ ್ಞಾವುದೇ ವಿಚಾರ ನಂಬುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ ್ಞರೆ ಮಾಡುವ ವ್ಯಕ್ತಿಗೆ ನಿಮ್ಮ ಬಗ್ಗೆ ಎಲ್ಲವೂ ತಿಳಿದಿದ್ದರೂ ನಂಬಬೇಡಿ ಓಟಿಪಿ, ಯುಪಿಐ, ಪಿನ್ ನಂಬರ್, ಕಾರ್ಡ್ ವಿವರ ಯಾವುದೇ ಕಾರಣಕ್ಕೂ ಹೇಳಬೇಡಿ.

ನಕಲಿ ಚಲನ್ (ದಂಡದ ನೋಟಿಸ್) ಸಂದೇಶಗಳ ಬಗ್ಗೆ ಎಚ್ಚರವಿರಲಿ ಚಲನ್ ಮೊತ್ತವನ್ನು ಅಧಿಕೃತ ‘ಇ-ಚಲನ್’ ವೇದಿಕೆಯಲ್ಲೇ ಪರಿಶೀಲಿಸಿಕೊಳ್ಳಿ.

ರಾಜ್ಯದ ಸಂಚಾರ ಪೊಲೀಸ್ ವೆಬ್​ಸೈಟ್​ನಲ್ಲಿ ದಂಡ ಪಾವತಿಸಿ ಸೈಬರ್ ವಂಚನೆಗೆ ಒಳಗಾದರ ತಕ್ಷಣ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ.