ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ ಸಾಯಿಬಣ್ಣ
- 37 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಸಾಯಿಬಣ್ಣ
ಬೆಂಗಳೂರು: ಮೂರು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಜೆವರ್ಗಿ ಮೂಲದ ಸಾಯಿಬಣ್ಣ ಲಿಂಗಪ್ಪ ನಾಟಿಕಾರ್ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿದ್ದಾರೆ.
ಬಿಡುಗಡೆ ಬಳಿಕ ಮಾತನಾಡಿದ ಅವರು, ಒಂದು ನಿಮಿಷಿದ ಕೋಪದಿಂದ ಮಾಡಿದ ತಪ್ಪಿನಿಂದ ತಮ್ಮ ಬದುಕು ಸಂಪೂರ್ಣ ಹಾಳಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಸಾಯಿಬಣ್ಣ ಅವರು ಹಿಂದೆ ಕರ್ನಾಟಕ ರಾಜ್ಯ ಸಹಕಾರ ಸಂಘದಲ್ಲಿ (ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ) ಕ್ಲಕ್ ಆಗಿ ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿದ್ದ, ಈ ಪ್ರಕರಣದಲ್ಲಿ ಬಂಧಿತರಾಗಿದ್ದರು. ಬಳಿಕ ಒಂದು ವರ್ಷದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ವೇಳೆ ಜೈಲಿನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರ ಮೂಲಕ ಅವರ ಮಗಳನ್ನು ವಿವಾಹವಾಗಿದ್ದರು.
ನಂತರ ಮೊದಲ ಪತ್ನಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದರು. ಆ ವೇಳೆ ಎರಡನೇ ಪತ್ನಿ ಗರ್ಭಿಣಿಯಾಗಿದ್ದರು. 2 ವರ್ಷಗಳ ಬಳಿಕ ಪೆರೋಲ್ ಮೇಲೆ ಹೊರಬಂದಾಗ, ಎರಡನೇ ಪತ್ನಿಗೂ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧವಿದೆ ಎಂದು ತಿಳಿದು ಆಕ್ರೋಶಗೊಂಡು, ಚಾಕುವಿನಿಂದ ಎರಡನೇ ಪತ್ನಿಯನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಆಕೆಯ ಜೆತೆಗಿದ್ದ ಮಗುವಿಗೂ ಚಾಕುವಿನ ಗಾಯವಾಗಿ ಮೃತಪಟ್ಟಿತ್ತು.ಬಳಿಕ ತಾವೂ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದರೂ, ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಎಲ್ಲ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ ಸಾಯಿಬಣ್ಣ, ಒಟ್ಟು 37 ವರ್ಷಗಳ ಕಾಲ ಜೈಲಿನಲ್ಲಿದ್ದು, ಇದೀಗ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿದ್ದಾರೆ.
ನನ್ನ ಬಳಿ ಇದ್ದ ಹತ್ತಾರು ಎಕರೆ ಜಮೀನು ಕಳೆದುಕೊಂಡೆ. 37 ವರ್ಷ ಜೈಲಿನಲ್ಲಿ ಕಳೆದಿದ್ದೇನೆ. ಕೋಪದ ಒಂದು ನಿರ್ಧಾರ ನನ್ನ ಬದುಕನ್ನೇ ನಾಶ ಮಾಡಿತು ಎಂದು ವಿಷಾದ ವ್ಯಕ್ತಪಡಿಸಿದರು.