ಕರ್ನಾಟಕ ಸಾಹಿತ್ಯ ಅಕಾಡೆಮಿ  
ರಾಜ್ಯ

ಸಾಹಿತ್ಯ ಅಕಾಡೆಮಿಯಿಂದ ವಿಜ್ಞಾನ ಸಾಹಿತ್ಯ ಮತ್ತು ಸಂವಹನ ಕಾರ್ಯಾಗಾರ ಜ. 22ರಿಂದ ಆಯೋಜನೆ

ಪ್ರಮುಖ ಮುಖ್ಯಾಂಶಗಳು

  • * ‘ವಿಜ್ಞಾನ ಸಾಹಿತ್ಯ ಮತ್ತು ಸಂವಹನ’ ಕುರಿತ ಕಾರ್ಯಾಗಾರ
  • * ಅಕಾಡೆಮಿ ಕಚೇರಿಯಲ್ಲಿ ಜ. 22ರಿಂದ ಆಯೋಜನೆ
ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಜ.22 ಅಕಾಡೆಮಿ ಕಚೇರಿಯಲ್ಲಿ ‘ವಿಜ್ಞಾನ ಸಾಹಿತ್ಯ ಮತ್ತು ಸಂವಹನ’ ಕುರಿತ ಕಾರ್ಯಾಗಾರ ಆಯೋಜಿಸಲಾಗಿದೆ.
ಈ ಕುರಿತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯಲೋಕದಲ್ಲಿ ಪಂಪನಿಂದ ಪ್ರಾರಂಭಗೊಂಡು ಸಾಕಷ್ಟು ಮಂದಿ ಅತ್ಯದ್ಭುತವಾಗಿ ವಿಜ್ಞಾನದ ಕುರಿತು ಬರೆದಿದ್ದಾರೆ. ಆದರೆ, ಅತ್ಯಾಧುನಿಕ ಕಾಲವಾದ ಇಂದು ವಿಜ್ಞಾನ ಸಾಹಿತ್ಯಕ್ಕೆ ಹಾಗೂ ವಿಜ್ಞಾನ ಸಾಹಿತ್ಯ ಬರಹಗಾರರಿಗೆ ಸೂಕ್ತ ಬೆಂಬಲ ಹಾಗೂ ತರಬೇತಿ ಇಲ್ಲವಾಗಿದೆ. ಅದನ್ನು ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮಲ್ಲಿ ಸಾಕಷ್ಟು ವಿದ್ವತ್ತು, ಜ್ಞಾನವಿದೆ. ಆದರೆ, ಅದನ್ನು ಹೇಗೆ ಸೃಜನಶೀಲ ಲೇಖನವಾಗಿ, ಕೃತಿಯಾಗಿ ರಚಿಸಬೇಕೆಂಬುದರ ಬಗೆಗೆ ಕೆಲ ತೊಡಕುಗಳಿವೆ. ಉನ್ನತ ವ್ಯಾಸಂಗದ ಸಂದರ್ಭದಲ್ಲಿ ಉಲ್ಲೇಖ ಅಥವಾ ಓದಿಗೆ ಪೂರಕವಾದ ವಿಜ್ಞಾನ ಸಂಬಂಧಿತ ಕನ್ನಡದ ಪುಸ್ತಕಗಳು ದೊರೆಯುವುದಿಲ್ಲ. ಇದು ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಳ್ಳದಿರಲೂ ಕಾರಣವಾಗಿದೆ. ಹಾಗಾಗಿ ವಿಜ್ಞಾನ ಬರೆಯುವ ಯುವ ಸಾಹಿತಿಗಳನ್ನು ತಯಾರಿಸಬೇಕಾದ ಅನಿವಾರ್ಯತೆ ಇದ್ದು, ಅದಕ್ಕೆ ಈ ಕಾರ್ಯಾಗಾರ ಸಹಕಾರಿಯಾಲಿದೆ ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎ.ಎಚ್. ರಾಜಾಸಾಬ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಲಿದ್ದು, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜ.23ರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಡಾ. ನೆಲ್ಲುಕುಂಟೆ ವೆಂಕಟೇಶಯ್ಯ, ಡಾ. ಎಚ್.ಆರ್. ಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
50 ಶಿಬಿರಾರ್ಥಿಗಳು ಭಾಗಿ:
ಕಾರ್ಯಾಗಾರದಲ್ಲಿ 50 ಮಂದಿ ಶಿಬಿರಾರ್ಥಿಗಳು ಭಾಗವಹಿಸಬಹುದಾಗಿದ್ದು, ಈಗಾಗಲೇ 25 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಪತ್ರಕರ್ತರನ್ನೂ ಒಳಗೊಂಡಂತೆ ಆಸಕ್ತ ಸಾರ್ವಜನಿಕರೆಲ್ಲರೂ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಎರಡು ದಿನವೂ ನುರಿತ ವಿಜ್ಞಾನ ಸಾಹಿತಿಗಳಿಂದ ಉಪನ್ಯಾಸ, ಪ್ರಾಯೋಗಿಕ ಅಧಿವೇಶನಗಳು ನಡೆಯಲಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಆಸಕ್ತರು:https://forms.gle/dCP2UEgYhEWRaDyYA
ಸಂಪರ್ಕಿಸಬಹುದು.