ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟಕ್ಕೆ ಶ್ರೀರಂಗಪಟ್ಟಣ ತಾಲೂಕು ನಿರ್ದೇಶಕರಾಗಿ ಆಯ್ಕೆಯಾದ ಎಸ್.ಸೋಮಸುಂದರ್ ಅವರನ್ನು ಅಭಿನಂದಿಸಲಾಯಿತು. ಎಂ.ನಂದೀಶ್, ರಜನಿಕಾಂತ್ ಗೌಡ, ಬೆಳಗೊಳ ರವೀಶ್, ಶ್ರೀಕಾಂತ್, ಸುನೀಲ್, ಎಸ್.ಸುರೇಶ್ ಇತರರಿದ್ದರು. 
ರಾಜ್ಯ

ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಎಸ್.ಸೋಮಸುಂದರ್ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟ
  • ಶ್ರೀರಂಗಪಟ್ಟಣ ತಾಲೂಕು ನಿರ್ದೇಶಕರ ಸ್ಥಾನ
ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ತಾಲೂಕು ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎಸ್.ಸೋಮಸುಂದರ್ ಜಯಗಳಿಸಿದ್ದಾರೆ.
ಮಂಡ್ಯದ ಲಕ್ಷ್ಮೀಜನಾರ್ದನ ಶಾಲೆಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ಒಟ್ಟು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಂತಿಮ ಕ್ಷಣದಲ್ಲಿ ಗಾಯತ್ರಿದೇವಿ ನಾಮಪತ್ರ ಹಿಂಪಡೆದಿದ್ದರು. ಕಣದಲ್ಲಿ ಉಳಿದಿದ್ದ ಇಬ್ಬರು ಅಭ್ಯರ್ಥಿಗಳಲ್ಲಿ ಎಸ್.ಸೋಮಸುಂದರ್ ಒಬ್ಬರೇ 7 ಮತ ಪಡೆದಿದ್ದು, ಇವರ ಪ್ರತಿ ಸ್ಪರ್ಧಿ ಮಾಯಿಗೌಡ 3ಮತ ಪಡೆದು ಪರಾಭವಗೊಂಡರು.
ಮನ್ಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಬೋರೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ಪ್ರೋತ್ಸಾಹದಿಂದ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಸೋಮಸುಂದರ್ ಅವರ ಹೆಸರನ್ನು ಚುನಾವಣಾಧಿಕಾರಿ ರವಿ ಘೋಷಿಸಿದರು.
ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟ ನಿಗಮದ ಜಿಲ್ಲಾ ನಿರ್ದೇಶಕ ಎಂ.ನಂದೀಶ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಜನಿಕಾಂತ್‌ಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬೆಳಗೊಳ ರವೀಶ್, ಕೆ.ಆರ್.ಎಸ್.ರಾಮೇಗೌಡ, ಅಪೆಕ್ಸ್ ಬ್ಯಾಂಕ್‌ಮಾಜಿ ನಿರ್ದೇಶಕ ಶಿವಯ್ಯ, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ್, ಸುನೀಲ್, ಎಸ್.ಸುರೇಶ್ ಇತರರು ಅಭಿನಂದಿಸಿದರು.