ಆನೇಕಲ್ ತಾಲೂಕಿನ -ನೆರಿಗಾ ಗ್ರಾಪಂನಿಂದ ನಿಮಾರ್ಣಗೊಂಡ ಆರೋಗ್ಯ ಉಪಕೇಂದ್ರದ ಕಟ್ಟಡವನ್ನು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು. ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್, ಚಿನ್ಮಯ ಸೇವಾ ಸಂಸ್ಥೆ ಅಧ್ಯಕ್ಷ ಚಿನ್ನಪ್ಪ ವೈ.ಚಿಕ್ಕಹಾಗಡೆ ಇದ್ದರು.
ಆನೇಕಲ್ : ಕಾಂಗ್ರೆಸ್ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷಗಳು ಬೆಂಬಲಿಸಬೇಕು. ಕೇವಲ ಟೀಕಿಸಲೇಬೇಕೆಂಬ ಕಾರಣಕ್ಕಾಗಿ ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
ತಾಲೂಕಿನ ನೆರಿಗಾ ಗ್ರಾಪಂನಿಂದ ವರ್ಗ 1ರ ಅನುದಾನದಲ್ಲಿ 40 ಲಕ್ಷ ರೂ. ದೇಣಿಗೆಯಿಂದ ನಿಮಾರ್ಣಗೊಂಡಿರುವ ಆರೋಗ್ಯ ಉಪಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಡವರ ಪರ, ಯಾವುದೇ ಯೋಜನೆ ಜಾರಿ ಮಾಡಿರುವ ಉದಾಹರಣೆಯಿಲ್ಲ. ಹೀಗಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಯೋಜನೆಗಳನ್ನು ಟೀಕಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅವಧಿಯಲ್ಲಿ ಕ್ಷೇತ್ರಕ್ಕೆ ಅನುದಾನ ಇಲ್ಲದೇ ರಸ್ತೆ ಸೇರಿ ಮೂಲ ಸೌಲಭ್ಯ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಆದರೆ, ಆಡಳಿತದಲ್ಲಿ ಕಾಂಗ್ರೆಸ್ ಇರುವುದರಿಂದ ಅಗತ್ಯ ಅನುದಾನ ತರಿಸಿಕೊಂಡು ತಾಲೂಕಿನಾದ್ಯಂತ ರಸ್ತೆ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳಿಸುತ್ತಿದ್ದೇನೆ ಎಂದರು.
ಯಾವುದೇ ಗ್ರಾಪಂ ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಅನುದಾನದ ಜತೆಗೆ ಹಣವುಳ್ಳವರು ಸಮಾಜ ಅಭಿವೃದ್ಧಿಗೆ ಮುಂದಾಗಬೇಕು. ನೆರಿಗಾ ಪಂಚಾಯಿತಿ ಮುಖಂಡ ಪ್ರಭಾಕರ್ ರೆಡ್ಡಿ ಅವರು ಆರೋಗ್ಯ ಉಪಕೇಂದ್ರದ ಕಟ್ಟಡಕ್ಕೆ 40 ಲಕ್ಷ ರೂ. ದೇಣಿಗೆ ನೀಡಿದ್ದು, ಗ್ರಾಪಂ ವ್ಯಾಪ್ತಿಯ ವಾಟರ್ಮನ್ಗಳಿಗೆ ಉಚಿತ ಬೈಕ್ ವಿತರಿಸಿದ್ದಾರೆ. ಹೀಗೆ ಆರ್ಥಿಕ ಸಬಲರಾಗಿರುವವರು ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ನೆರಿಗಾ ಗ್ರಾಪಂ ಅಧ್ಯಕ್ಷೆ ವೇದಾ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯ ಸೇರಿ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಅದರ ಭಾಗವಾಗಿಯೇ ನೆರಿಗಾದಲ್ಲಿ ಆರೋಗ್ಯ ಉಪ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಸದಸ್ಯರಾದ ಸುಧಾ, ಸತೀಶ್, ಲತಾ, ಮರಿಯಪ್ಪ, ಸುಜಾತಾ, ರಂಜಿತ್ಕುಮಾರ್, ಅಶ್ವಥ ರೆಡ್ಡಿ, ಪಿ.ರಾಜಪ್ಪ, ಗೀತಾ, ಬಾಬು, ಅಶೋಕ್, ಸುಮಲತಾ, ಪವಿತ್ರಾ, ಗೋಪಾಲರೆಡ್ಡಿ, ಶೋಭಾ, ರಾಮು, ಪಿಡಿಒ ಕಾಂತರಾಜು ಇತರರು ಇದ್ದರು.