ಕಮಲಾಪುರ ತಾಲೂಕಿನ ಕಲಕುಟಗಾದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು. ತಾಜೋದ್ದಿನ್ ಪಟೇಲ್, ಗಂಗಪ್ಪಗೌಡ ಪಾಟೀಲ್, ಶಮ್ಶೋದ್ದಿನ್ ಪಟೇಲ್, ಮಲ್ಲಿಕಾರ್ಜುನ ಮರತೂರಕರ್, ಸತೀಶ ಇತರರಿದ್ದರು.
- ಶಾಸಕ ಬಸವರಾಜ ಮತ್ತಿಮಡು ಹೇಳಿಕೆ
- ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಕಮಲಾಪುರ: ಕಲಕುಟಗಾ ಗ್ರಾಮದ ಜನರ ದಶಕಗಳ ಬೇಡಿಕೆಯಾಗಿದ್ದ ಡಾಂಬರ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲಿಯೇ ಹಳ್ಳಿಗೆ ಸುಗಮ ರಸ್ತೆ ನಿರ್ಮಾಣವಾಗಲಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಈವರೆಗೂ 9 ಕೋಟಿ ರೂ.ಗೂ ಅಧಿಕ ಅನುದಾನ ನೀಡಿರುವೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಕಲಕುಟಗಾದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಲಕುಟಗಾ ಕ್ರಾಸ್ನಿಂದ ಗ್ರಾಮದವರೆಗೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಹದಗೆಟ್ಟ ರಸ್ತೆಯಲ್ಲಿ ಜನರ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಸಾರ್ವಜನಿಕರು ಸಮಸ್ಯೆ ಗಮನಕ್ಕೆ ತಂದಾಗ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಂಡು ನಿಮ್ಮ ಹಳ್ಳಿಗೆ ಬರುವ ಎಂದಿದ್ದೆ. ಕೊಟ್ಟ ಮಾತಿನಂತೆ ಕಾಮಗಾರಿಗೆ ಚಾಲನೆ ನೀಡುವುದಕ್ಕಾಗಿ ಗ್ರಾಮಕ್ಕೆ ಬಂದಿದ್ದೇನೆ ಎಂದರು.
ರಾಜ್ಯ ಸರ್ಕಾರ ನಿಗದಿತ ಅನುದಾನ ನೀಡದಿರುವುದರಿಂದ ಅಭಿವೃದ್ಧಿ ಕಾರ್ಯ ಮಾಡಲು ಆಗುತ್ತಿಲ್ಲ. ಸಿಕ್ಕ ಹಣದಲ್ಲಿಯೇ ಎಲ್ಲರಿಗೂ ಸಮಾಧಾನ ಪಡಿಸುವ ಕೆಲಸ ಮಾಡುತ್ತಿರುವೆ. ಕಲಕುಟಗಾದಲ್ಲಿ ಶುದ್ಧ ಕುಡಿವ ನೀರಿನ ಟಕ, ಸಿಸಿ ರಸ್ತೆ, ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಂಬಲಗಾ ತಾಂಡಾದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಅಡಿಯಲ್ಲಿ ಒಎಸ್ಟಿ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ್ದೇನೆ. ಓಕಳಿ ಗ್ರಾಮದ ಬಳಿಯ ಸೇತುವೆ ಮೇಲ್ದರ್ಜೆಗೇರಿಸಲು 1.75 ಕೋಟಿ ರೂ. ಅನುದಾನ ಬಂದಿದ್ದು, ಟೆಂಡರ್ ಹಂತದಲ್ಲಿದೆ. ಶ್ರೀ ಕೆಲಸ ಶುರುವಾಗಲಿದೆ ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ್, ಉದ್ಯಮಿ ಶಮ್ಶೋದ್ದಿನ್ ಪಟೇಲ್, ಗ್ರಾಪಂ ಮಾಜಿ ಅಧ್ಯ ತಾಜೋದ್ದಿನ್ ಪಟೇಲ್, ಪ್ರಮುಖರಾದ ಮಲ್ಲಿಕಾರ್ಜುನ ಮರತೂರಕರ, ಯುವರಾಜ ಸಾಹು, ವಿಜಯಕುಮಾರ ಪಾಟೀಲ್, ಸತೀಶ ಸೌಕಾರ, ಶಿವಾನಂದ ಪಾಟೀಲ್, ಚಂದ್ರಕಾಂತ ಬಿರಾದಾರ, ಸತೀಶ ಪೂಜಾರಿ, ಶಿವಕುಮಾರ ಪಾಟೀಲ್, ಚನ್ನಬಸಪ್ಪ ಮುನ್ನಳ್ಳಿ, ಸಿದ್ದಯ್ಯ ಸ್ವಾಮಿ ಇತರರಿದ್ದರು.
ಕಲಕುಟಗಾ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, 1ರಿಂದ 8ನೇ ತರಗತಿವರೆಗೆ ವಿದ್ಯಾರ್ಜನೆ ನಡೆಯುತ್ತಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳಾಗುತ್ತಿದ್ದರೂ ಈವರೆಗೂ ಬಿಸಿಯೂಟ ಆರಂಭವಾಗಿಲ್ಲ. ಇದರಿಂದ ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಅಡುಗೆ ಸಿಬ್ಬಂದಿಯನ್ನು ಕೇಳಿದರೆ ಸಂಬಳ ನೀಡಿಲ್ಲ, ಹೀಗಾಗಿ ಕೆಲಸಕ್ಕೆ ಬರಲ್ಲ ಎನ್ನುತ್ತಾರೆ. ಇನ್ನು ಗ್ರಾಮದಲ್ಲಿನ ಸಾರ್ವಜನಿಕ ಶೌಚಗೃಹಕ್ಕೆ ಅಗತ್ಯ ನೀರಿನ ಸೌಲಭ್ಯವಿಲ್ಲದ ಕಾರಣ ತೊಂದರೆ ಆಗುತ್ತಿದೆ. ಕೂಡಲೇ ಗಮನಹರಿಸಿ ಎಲ್ಲ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಸಲ್ಲಿಸಿದರು.