Rs 75 crore for Madhugiri development.
ಮಧುಗಿರಿ: ಗಡಿ ಭಾಗದ ರಸ್ತೆ ಸಂಪರ್ಕ ಅಭಿವೃದ್ಧಿಗೆ 75 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ತಾಲೂಕಿನಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ನಂತರ ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೀಮಾಂದ್ರಕ್ಕೆ ಸಂಪರ್ಕ ಕಲ್ಪಿಸುವ ಗಡಿ ಭಾಗದ ರಸ್ತೆಗಳು ಹದಗೆಟ್ಟಿದ್ದು, ಶ್ರೀವೇ ಅಭಿವೃದ್ಧಿ ಪಡಿಸಲಾಗುವುದು. ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅಮೃತ ಯೋಜನೆಯಡಿ 40 ಕೋಟಿ ಹಾಗೂ ವಿಶೇಷ ಅನುದಾನ 25 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಕಾಲನಿಗಳ ಅಭಿವೃದ್ಧಿಗೆ 2 ಕೋಟಿ ರೂ., ಐ.ಡಿ.ಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೊಠಡಿ ನಿಮಾರ್ಣಕ್ಕೆ 1 ಕೋಟಿ ರೂ. ಬಿಡುಗಡೆಯಾಗಿದ್ದು, ಸ್ಥಳ ದೊರೆತರೆ ಮತ್ತೆ 2 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.
ಪಟ್ಟಣ ಮತ್ತು ಹೋಬಳಿ ಕೇಂದ್ರಗಳಲ್ಲಿ ಬೆಸ್ಕಾಂನಿಂದ 15 ಕೋಟಿ ರೂ. ವೆಚ್ಚದ ಕೇಬಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ಮುಂದಿನ ಜಿಪಂ, ತಾಪಂ ಚುನಾವಣೆಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಬೇಕು. ಇದರಿಂದ 2028ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸುಲಭವಾಗಲಿದೆ ಎಂದರು.
ಮುಖಂಡರಾದ ಶನಿವಾರಂರೆಡ್ಡಿ, ಪಿ.ಟಿ.ಗೋವಿಂದಯ್ಯ, ನರಸಿಂಹ ರೆಡ್ಡಿ, ಪಿಡಬ್ಲ್ಯುಡಿ ಎಇಇ ಸಂಪತ್ ಕುಮಾರ್, ಜಿಪಂ ಎಇಇ ಮಂಜುನಾಥ್, ಪಿಡಿಒ ಆಂಜನೇಯಲು, ಯೋಜನಾ ನಿರ್ದೇಶಕ ಧನಂಜಯ, ಸಿಪಿಐ ಹನುಮಂತರಾಯಪ್ಪ, ಪಿಎಸ್ಐ ರವೀಂದ್ರ ಇತರರಿದ್ದರು.