ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
- ಎಲ್‌ಬಿಎ ಪದ್ಧತಿಯಡಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಪ್ರತಿಯ ವೆಚ್ಚಕ್ಕೆ 6.11 ಕೋಟಿ ರೂ. ಗಳನ್ನು ಸಮಗ್ರ ಶಿಕ್ಷಣ ಕರ್ನಾಟಕ ಬಿಡುಗಡೆ
- ಪ್ರಶ್ನಾ ಕೋಠಿಯಿಂದ ಪ್ರಶ್ನೆಗಳನ್ನು ಬಳಸಿ ಪ್ರಶ್ನೆ ಪತ್ರಿಕೆ ತಯಾರಿಸಬೇಕು ಮತ್ತು ಪ್ರತಿ ವಿದ್ಯಾರ್ಥಿಗೆ ಪ್ರಶ್ನೆ ಪತ್ರಿಕೆಯ ಛಾಯಾ ಪ್ರತಿಯನ್ನು ನೀಡುವಂತೆ ಸೂಚಿಸಲಾಗಿತ್ತು
- ಪ್ರಶ್ನೆ ಪತ್ರಿಕೆಯ ಛಾಯ ಪ್ರತಿ ವೆಚ್ಚ ಮತ್ತು ಪ್ರತಿ ಪರೀಕ್ಷೆಯ ವಿದ್ಯಾರ್ಥಿಗಳ ಅಂಕಗಳನ್ನು ಎಸ್‌ಎಟಿಎಸ್ ಯಲ್ಲಿ ನಮೂದು ಮಾಡುವ ವೆಚ್ಚಕ್ಕಾಗಿ ಈ ಅನುದಾನ ಬಿಡುಗಡೆ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಜಾರಿಗೆ ತಂದಿರುವ ಪಾಠ ಆಧಾರಿತ ಮೌಲ್ಯಾಂಕನ (ಎಲ್‌ಬಿಎ) ಪದ್ಧತಿಯಡಿ ಮಕ್ಕಳಿಗೆ ಪ್ರತಿ ಅಧ್ಯಾಯ ಪೂರ್ಣಗೊಂಡ ಬಳಿಕ ಪರೀಕ್ಷೆ ನಡೆಸಲಾಗುತ್ತಿದ್ದು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಪ್ರತಿಯ ವೆಚ್ಚಕ್ಕೆ 6.11 ಕೋಟಿ ರೂ. ಗಳನ್ನು ಸಮಗ್ರ ಶಿಕ್ಷಣ ಕರ್ನಾಟಕ ಬಿಡುಗಡೆ ಮಾಡಿದೆ.
ಪಾಠ ಆಧಾರಿತ ಮೌಲ್ಯಾಂಕನದ ಪ್ರಶ್ನೆ ಪತ್ರಿಕೆಗಳು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಯ ಪ್ರಶ್ನಾ ಕೋಠಿಯಲ್ಲಿ ಲಭ್ಯ ಇದ್ದವು. ಈ ಪ್ರಶ್ನಾ ಕೋಠಿಯಿಂದ ಪ್ರಶ್ನೆಗಳನ್ನು ಬಳಸಿ ಪ್ರಶ್ನೆ ಪತ್ರಿಕೆ ತಯಾರಿಸಬೇಕು ಮತ್ತು ಪ್ರತಿ ವಿದ್ಯಾರ್ಥಿಗೆ ಪ್ರಶ್ನೆ ಪತ್ರಿಕೆಯ ಛಾಯಾ ಪ್ರತಿಯನ್ನು ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಪ್ರಶ್ನೆ ಪತ್ರಿಕೆಯ ಛಾಯ ಪ್ರತಿ ವೆಚ್ಚ ಮತ್ತು ಪ್ರತಿ ಪರೀಕ್ಷೆಯ ವಿದ್ಯಾರ್ಥಿಗಳ ಅಂಕಗಳನ್ನು ವಿದ್ಯಾರ್ಥಿ ಸಾಧನೆ ನಿಗಾ ವ್ಯವಸ್ಥೆ (ಎಸ್‌ಎಟಿಎಸ್) ಯಲ್ಲಿ ನಮೂದು ಮಾಡುವ ವೆಚ್ಚಕ್ಕಾಗಿ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಒಂದರಿಂದ ಎಂಟನೇ ತರಗತಿ ಬೋಧಿಸುವ 41,506 ಶಾಲೆಗಳಿದ್ದು, ಈ ಶಾಲೆಗಳಿಗೆ ಒಟ್ಟು 3.29 ಕೋಟಿ ರೂ ಮತ್ತು ಎಂಟರಿಂದ ಹತ್ತನೇ ತರಗತಿಯವರೆಗೆ ಬೋಧಿಸುವ 5,360 ಶಾಲೆಗಳಿಗೆ ಒಟ್ಟು 2.28 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.