ಕಕ್ಕೇರಾ ಪುರಸಭೆಯಲ್ಲಿ ಅಧ್ಯಕ್ಷ ಪರಮಣ್ಣ ಕಮತಗಿ ಅವರು ಮಂಗಳವಾರ 2026&27ನೇ ಸಾಲಿನ ಆಯವ್ಯಯ ಮಂಡಿಸಿದರು. ಉಪಾಧ್ಯಕ್ಷ ಜೆಟ್ಟೆಪ್ಪ ದಳಾರ, ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್ ಸೇರಿ ಸದಸ್ಯರಿದ್ದರು.
- ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಮಂಡನೆ
- ಉಪಾಧ್ಯಕ್ಷ ದಳಾರ, ಮುಖ್ಯಾಥಿಕಾರಿ ತೇಲಂಗ್ ಸಾಥ್
ಕಕ್ಕೇರಾ: ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಅಧ್ಯಕ್ಷ ಪರಮಣ್ಣ ಕಮತಗಿ ಅವರು 2026-27ನೇ ಸಾಲಿನ ನಡೆದ ಬಜೆಟ್ ಮಂಡನೆ ಸಭೆಯಲ್ಲಿ 3.92ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ರಾಜಸ್ವ ಸ್ವೀಕೃತಿಗಳು 890 ಲಕ್ಷ ರೂ, ರಾಜಸ್ವ ಪಾವತಿಗಳು 807ಲಕ್ಷ ರೂ ವಹಿಸಬೇಕಿದೆ. ಬಂಡವಾಳ ಸ್ವೀಕೃತಿಗಳು 380 ಲಕ್ಷ ರೂ. ಬಂಡವಾಳ ಪಾವತಿಗಳು 460 ಲಕ್ಷ ರೂ, ಪಾವತಿಸಬೇಕಿದೆ. ಅಸಾಧಾರಣ ಸ್ವೀಕೃತಿಗಳು, 735 ಲಕ್ಷ ರೂ, ಅಸಾಧಾರಣ ಪಾವತಿಗಳು 735 ಲಕ್ಷ ರೂ. ಪಾವತಿಗೆ ಇರಿಸಲಾಗಿದೆ. ಒಟ್ಟಾರೆ 3.92ಲಕ್ಷ ರೂ. ಉಳಿತಾಯ ಬಜೆಟ್ ಎಂದು ಹೇಳಿದರು.
ನಗದು ಮತ್ತು ಬ್ಯಾಂಕ್ ಶಿಲ್ಕುಗಳು 470 ಲಕ್ಷ, ಎಸ್ಎಫ್ಸಿ ವೇತನ ಅನುದಾನಗಳು 490 ಲಕ್ಷ ರೂ, ವಾಣಿಜ್ಯ ಮಳಿಗೆಗಳಿಂದ 13.50 ಲಕ್ಷ ರೂ, ಆಸ್ತಿ ತೆರಿಗೆ ಆದಾಯ 35 ಲಕ್ಷ ರೂ, ವಿದ್ಯುತ್ ಅನುದಾನ 116 ಲಕ್ಷ ರೂ, 15ನೇ ಹಣಕಾಸು ಯೋಜನೆಯಡಿ 3.70 ಲಕ್ಷ ರೂ ಮೀಸಲಿಡಲಾಗಿದೆ. ಎಸ್ಸಿ, ಎಸ್ಟಿ ಅಭಿವೃದ್ಧಿ ನಿಧಿ 20 ಲಕ್ಷ ರೂ. ಹಾಗೂ ಅಂಗವಿಕಲ ಅಭಿವೃದ್ಧಿಗೆ 5 ಲಕ್ಷ ರೂ. ಮೀಸಲಿರಿಸಲಾಗಿದೆ.
ಆಯವ್ಯಯದಲ್ಲಿ ಪ್ರಮುಖವಾಗಿ ಪಟ್ಟಣದ ಸೌಂದರೀಕರಣಕ್ಕೆ, ಕುಡಿವ ನೀರು, ಒಳಚರಂಡಿ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಲು ನಿಗದಿ ಮಾಡಿದ್ದು, ಅನುಮೋದನೆಯ ಬಾಕಿ ಇದೆ ಎಂದು ಸಭೆಯಲ್ಲಿ ಹೇಳಿ ಸದಸ್ಯರೊಂದಿಗೆ ಆಯವ್ಯಯದ ಕುರಿತು ಚರ್ಚಿಸಲಾಯಿತು.
ಸದಸ್ಯರಾದ ವೆಂಕಟೇಶನಾಯಕ ಜಹಗೀರದಾರ, ಪರಶುರಾಮ ಗೋವಿಂದರ್ ಮಾತನಾಡಿ, ಕಕ್ಕೇರಾ ಸರಹದ್ದು ವ್ಯಾಪ್ತಿಯಲ್ಲಿ ಬರುವ ನಿಂಗಾಪುರ, ಹಿರೇಹಳ್ಳ ಹಾಗೂ ಪೀರಗಾರದೊಡ್ಡಿ ಹತ್ತಿರ ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಸ್ವಾಗತ ಕಮಾನುಗಳಿಗೆ ಹೆಸರು ಬರೆಸಲು ಒತ್ತಾಯಿಸಿದಾಗ ಪುಣ್ಯೇತ್ರ ಶ್ರೀ ಸೋಮನಾಥ ದೇವರ ನಾಡಿಗೆ ಸ್ವಾಗತ ಎಂದು ಬರೆಸಲು ಬಜೆಟ್ದಲ್ಲಿ ತೀರ್ಮಾನಿಸಲಾಯಿತು.
ಮಲ್ಲು ದಂಡಿನ್, ನಿಂಗಪ್ಪನಾಯ್ಕ್ ಮಾತನಾಡಿ, ನಮ್ಮ ವಾರ್ಡ್ಗಳಲ್ಲಿ ಮಾಡಿದ ಕೆಲಸಗಳಿಗೆ 2 ವರ್ಷವಾದರೂ ಬಿಲ್ ಆಗದ ಕಾರಣ ಯಾವುದೇ ಅಬಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಪುರಸಭೆ ಬದಲು ಗ್ರಾಪಂ ಆಗಿದ್ದರೆ ಎಷ್ಟೋ ಉಪಯೋಗವಾಗುತ್ತಿತ್ತು ಎಂದು ಅಸಮಾಧಾನವ್ಯಕ್ತಪಡಿಸಿ ಸಭಾಂಗಣದಲ್ಲಿ ಮೈಕ್ ವ್ಯವಸ್ಥೆ ಮಾಡಬೇಕು ಎಂದರು.
ಪಟ್ಟಣಕ್ಕೆ ಮಂಜೂರಾದ ಪೊಲೀಸ್ ಠಾಣೆ ನಿರ್ಮಾಣಕ್ಕೆ ಹಾಗೂ ಪದವಿ ಕಾಲೇಜು ನಿರ್ಮಾಣಕ್ಕೆ ಜಾಗದ ಕುರಿತಾಗಿ, ಅಂಚೆ ಕಚೇರಿಗಾಗಿ ನಿವೇಶನ ಮತ್ತು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಅದರಲ್ಲೂ ಮುಖ್ಯವಾಗಿ ಕುಡಿವ ನೀರು, ಶೌಚಗೃಹ ನಿರ್ಮಾಣ, ವಿದ್ಯುತ್, ಒಳಚರಂಡಿ ನಿರ್ಮಾಣ ಮಂಜೂರು ಸೇರಿ ಅನೇಕ ಸಮಸ್ಯೆಗಳ ಮುಕ್ತಿಗಾಗಿ ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಗೆ ಶಾಸಕರನ್ನು ಹಾಗೂ ಸಂಸದರನ್ನು ಕರೆಸಲು ಸರ್ವ ಸದಸ್ಯರು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.
ಈ ವೇಳೆ ಉಪಾಧ್ಯಕ್ಷ ಜೆಟ್ಟೆಪ್ಪ ದಳಾರ, ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್, ಪುರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸೇರಿ ಪುರಸಭೆ ಸಿಬ್ಬಂದಿ ಇದ್ದರು.