ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘಕ್ಕೆ ಅನುದಾನ ಮಂಜೂರಾದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಂಘದ ತಾಲೂಕು ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಕನಕರಾಜು, ಉಪಾಧ್ಯಕ್ಷ ಕೆ.ಜಗನ್ನಾಥ್ ಹಾಗೂ ಸಂಘದ ಪದಾಧಿಕಾರಿಗಳು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು.
ದೊಡ್ಡಬಳ್ಳಾಪುರ : ತಾಲೂಕು ವಕೀಲರ ಸಂಘದ ಬಹುಕಾಲದ ಕನಸಾಗಿದ್ದ ವಕೀಲರ ಭವನ ನಿಮಾರ್ಣಕ್ಕೆ ರಾಜ್ಯ ಸರ್ಕಾರ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕೂಡಲೇ ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಆಂತರಿಕ ಹಣಕಾಸು ಸಲಹೆಗಾರ ಡಾ.ಸೋಮನಾಥ್ ಆದೇಶಿಸಿದ್ದಾರೆ.
ವಕೀಲರ ಭವನ ನಿಮಾರ್ಣಕ್ಕಾಗಿ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಗಿರೀಶ್ ಕುಮಾರ್ ಹಾಗೂ ಎಸ್.ಟಿ.ಆರ್.ಆರ್ ಯೋಜನಾ ಪ್ರಾಧಿಕಾರದ ನಿರ್ದೇಶಕರೂ ಆಗಿರುವ ವಕೀಲ ಸಿ.ಆರ್.ದೀಪು ಸೇರಿ ಹಲವು ಮುಖಂಡರು ನಿರಂತರ ಪ್ರಯತ್ನ ನಡೆಸಿದ್ದರು.
ವಕೀಲರ ಭವನ ನಿಮಾರ್ಣದಿಂದ ತಾಲೂಕಿನ ವಕೀಲರಿಗೆ ಮೂಲಸೌಕರ್ಯ ದೊರೆಯಲಿದ್ದು, ನ್ಯಾಯಾಂಗ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿಮಾರ್ಣವಾಗಲಿದೆ ಎಂಬ ಅಭಿಪ್ರಾಯವನ್ನು ವಕೀಲರು ವ್ಯಕ್ತಪಡಿಸಿದರು.