ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ ₹5,000 ಬೆಳೆಹಾನಿ ಪರಿಹಾರ ನೀಡುವುದಾಗಿ ಸ್ಪಷ್ಟಪಡಿಸಿದ ಉಪ ಮುಖ್ಯಮಂತ್ರಿ ಡಾ. ಕೆ. ಪರಮೇಶ್ವರ. 
ರಾಜ್ಯ

"2,000 ರೂ. ಅಂತಿಮ ಪರಿಹಾರವಲ್ಲ, ವದಂತಿಗಳನ್ನ ನಂಬಬೇಡಿ": ಪ್ರತಿ ರೈತನಿಗೆ 5000 ರೂ. ಖಚಿತ; ಡಿಸಿಎಂ ಪರಮೇಶ್ವರ ಸ್ಪಷ್ಟನೆ! Dr G Parameshwara

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಸ್ಥಿತಿ ನಿರ್ಮಾಣDr G Parameshwaraವಾಗಿದ್ದು, ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಪರಿಹಾರ ಘೋಷಣೆ ಮಾಡುವುದಷ್ಟೇ ಸರ್ಕಾರದ ಜವಾಬ್ದಾರಿಯಲ್ಲ. ಅರ್ಹ ರೈತರೆಲ್ಲರಿಗೂ ನ್ಯಾಯಯುತವಾಗಿ, ಗೌರವಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಕೆ. ಪರಮೇಶ್ವರ ತಿಳಿಸಿದ್ದಾರೆ.

ನಮ್ಮ ಸರ್ಕಾರ ರೈತರ ಪರವಾಗಿ ದೃಢವಾಗಿ ನಿಂತಿದ್ದು, ರೈತರಿಗೆ ನೀಡಿರುವ ಭರವಸೆಯನ್ನು ಕರ್ನಾಟಕದ ಎಲ್ಲ ರೈತರಿಗೆ ತಲುಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ. ಬರ ಪರಿಹಾರದ ಮೊದಲ ಕಂತಿನಲ್ಲಿ ಕೆಲವು ರೈತರಿಗೆ 2,500 ಬದಲಾಗಿ 2,000 ರೂ. ಜಮೆಯಾಗಿರುವ ಕುರಿತು ಆತಂಕ ಮತ್ತು ಗೊಂದಲ ವ್ಯಕ್ತವಾಗಿದೆ. ರೈತರ ಈ ಕಳವಳವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ವಿಷಯದ ಕುರಿತು ರಾಜ್ಯದ ಜನತೆಗೆ ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದಿದ್ದಾರೆ.

2000 ರೂ. ಅಂತಿಮ ಪರಿಹಾರವಲ್ಲ!

ಮೊದಲನೆಯದಾಗಿ, ಕೆಲವು ರೈತರ ಖಾತೆಗೆ ಜಮೆಯಾಗಿರುವ 2000 ರೂ. ಅವರಿಗೆ ಸಿಗುವ ಅಂತಿಮ ಪರಿಹಾರವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ 5,000 ರೂ. ಪರಿಹಾರ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಈ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ.

2026ರ ಅಕ್ಟೋಬರ್ 23 ರಂದು ಹೊರಡಿಸಿದ ಸರ್ಕಾರಿ ಆದೇಶದ ಮೂಲಕ ಅರ್ಹ ರೈತರಿಗೆ ತಲಾ 2,500 ಮೊದಲ ಕಂತಿನ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ, ನವೆಂಬರ್ 5 ರಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ 17.43 ಕೋಟಿ ರೂ. ಬರ ಪರಿಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ.

ಇದಾದ ಬಳಿಕ, ವಿಶೇಷವಾಗಿ ಕಡಿಮೆ ಜಮೀನು ಹೊಂದಿರುವ ರೈತರು ವ್ಯಕ್ತಪಡಿಸಿದ ಆತಂಕ ಮತ್ತು ಅಹವಾಲುಗಳನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಪರಿಹಾರ ಪಾವತಿಗೆ ಅನ್ವಯವಾಗುವ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರೂಪಿಸಿರುವ ಪ್ರಸ್ತುತ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ, ಬೆಳೆಹಾನಿಗೆ ನೀಡುವ ಪರಿಹಾರವನ್ನು ಕೃಷಿ ಭೂಮಿಯ ವಿಸ್ತೀರ್ಣ ಮತ್ತು ಬೆಳೆಗಳ ವರ್ಗೀಕರಣದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಮಾರ್ಗಸೂಚಿಗಳಲ್ಲಿ ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ 1,500, ನೀರಾವರಿ ಬೆಳೆಗಳಿಗೆ 2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ರೂ. ಪರಿಹಾರ ನಿಗದಿಪಡಿಸಲಾಗಿದೆ.

ಆದರೆ, ಈ ಕನಿಷ್ಠ ಮಾನದಂಡಗಳಿಗೆ ಸೀಮಿತವಾಗದೆ, ರೈತರ ಹಿತದೃಷ್ಟಿಯಿಂದ ಮತ್ತೊಂದು ಹೆಜ್ಜೆ ಮುಂದೆ ಹೋಗಲು ಮುಖ್ಯಮಂತ್ರಿಯವರು ಮತ್ತು ನಾನು ನಿರ್ಧರಿಸಿದ್ದೇವೆ. ರೈತರು ಹೊಂದಿರುವ ಕೃಷಿ ಭೂಮಿಯ ವಿಸ್ತೀರ್ಣ ಎಷ್ಟೇ ಇರಲಿ, ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ 5,000 ರೂ. ಬೆಳೆಹಾನಿ ಪರಿಹಾರ ನೀಡಲು ನಮ್ಮ ಸರ್ಕಾರ ದೃಢನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.

ನಮಗೆ ಎಲ್ಲಾ ರೈತರೂ ಒಂದೇ!

ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುವವರಿಗೂ, ಹಲವು ಎಕರೆ ಜಮೀನಿನಲ್ಲಿ ಕೃಷಿ ಮಾಡುವವರಿಗೂ ಬರಗಾಲದ ಸಂಕಷ್ಟ ಒಂದೇ. ಬೆಳೆ ನಷ್ಟದ ನೋವು, ಮುಂದಿನ ಬದುಕಿನ ಆತಂಕ ಮತ್ತು ಆರ್ಥಿಕ ತೊಂದರೆಗಳು ಎಲ್ಲರನ್ನೂ ಕಾಡುತ್ತವೆ. ಕೃಷಿ ಭೂಮಿಯ ವಿಸ್ತೀರ್ಣ ಕಡಿಮೆ ಇದೆ ಎಂಬ ಕಾರಣಕ್ಕೆ ರೈತರ ಬಗ್ಗೆ ಸರ್ಕಾರ ತೋರುವ ಕಾಳಜಿ ಕಡಿಮೆಯಾಗಬಾರದು ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ಮೊದಲ ಕಂತಿನಲ್ಲಿ 2,000 ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ 3,000 ರೂ ಪಾವತಿಸಲಾಗುವುದು. ಅದೇ ರೀತಿ, ಈಗಾಗಲೇ 2,500 ಪಡೆದಿರುವ ರೈತರಿಗೆ ಮತ್ತೊಂದು 2,500 ರೂ. ನೀಡಲಾಗುವುದು. ಈ ಮೂಲಕ ಅರ್ಹ ರೈತರೆಲ್ಲರಿಗೂ ತಲಾ ಕನಿಷ್ಠ 5,000 ರೂ. ಪರಿಹಾರ ತಲುಪುವುದನ್ನು ಖಚಿತಪಡಿಸಲಾಗುವುದು ಎಂದರು.

5,000 ರೂ. ಕನಿಷ್ಠ ಪರಿಹಾರ ಮೊತ್ತವಾಗಿದ್ದು, ಬೆಳೆಹಾನಿಯ ಪ್ರಮಾಣ, ಕೃಷಿ ಭೂಮಿಯ ವಿಸ್ತೀರ್ಣ ಹಾಗೂ ಅನ್ವಯವಾಗುವ ಮಾನದಂಡಗಳ ಆಧಾರದ ಮೇಲೆ ಅರ್ಹ ರೈತರಿಗೆ 5,000 ದಿಂದ 60,000 ರೂ. ದವರೆಗೆ ಹೆಚ್ಚಿನ ಬೆಳೆಹಾನಿ ಪರಿಹಾರ ನೀಡಲು ನಮ್ಮ ಸರ್ಕಾರ ಅವಕಾಶ ಕಲ್ಪಿಸಿದೆ.

ಪರಿಹಾರ ವಿತರಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಬಾಕಿ ಕಂತುಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಹಾಗೂ ಅರ್ಹ ರೈತರಲ್ಲಿ ಯಾರಿಗೂ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರ ತಪ್ಪಿಹೋಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಸರ್ಕಾರದ ನಿಯಮಗಳು ರೈತರ ನೆರವಿಗೆ ಬರಬೇಕೇ ಹೊರತು, ಅವರಿಗೆ ಪರಿಹಾರ ತಲುಪಿಸುವುದಕ್ಕೆ ಅಡ್ಡಿಯಾಗಬಾರದು. ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳು ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ರೈತರ ಹಿತ ಕಾಪಾಡಲು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲ ಎಂದಿದ್ದಾರೆ.

ವದಂತಿಗಳಿಗೆ ಕಿವಿಗೊಡಬೇಡಿ!

ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ರೈತರಿಗೂ ನನ್ನದೊಂದು ಮನವಿ ಇದೆ. ಬರ ಪರಿಹಾರದ ಕುರಿತು ಹರಡುತ್ತಿರುವ ವದಂತಿಗಳು, ತಪ್ಪು ಮಾಹಿತಿ ಹಾಗೂ ರಾಜಕೀಯ ಪ್ರೇರಿತ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಅನಗತ್ಯ ಗೊಂದಲಗಳಿಗೆ ಒಳಗಾಗಬೇಡಿ.

ರೈತರ ಸಮಸ್ಯೆಗಳ ಕುರಿತು ನೈಜ ಕಾಳಜಿಯಿಂದ ಪ್ರಶ್ನೆಗಳನ್ನು ಎತ್ತುವುದಕ್ಕೂ, ಮೊದಲ ಕಂತಿನಲ್ಲಿ ನೀಡಿರುವ ಮಧ್ಯಂತರ ಪರಿಹಾರವನ್ನೇ ಅಂತಿಮ ಪರಿಹಾರವೆಂದು ಬಿಂಬಿಸಿ ಗೊಂದಲ ಸೃಷ್ಟಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ವಿರೋಧ ಪಕ್ಷಗಳ ನಾಯಕರು ಈ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ ಎಂದು ಪರಮೇಶ್ವರ ತಿಳಿಸಿದ್ದಾರೆ.

ರೈತರ ಅಹವಾಲುಗಳನ್ನು ಆಲಿಸಲು ಅಥವಾ ಲೋಪದೋಷಗಳನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿಯವರಾಗಲಿ, ನಾನಾಗಲಿ ಎಂದಿಗೂ ಹಿಂಜರಿಯುವುದಿಲ್ಲ. ಬದಲಾಗಿ, ರೈತರು ತಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರುವುದನ್ನು ನಾವು ಸ್ವಾಗತಿಸುತ್ತೇವೆ.

ಅರ್ಹ ರೈತರಲ್ಲಿ ಯಾರಿಗಾದರೂ ನಿಗದಿತ ಮೊತ್ತಕ್ಕಿಂತ ಕಡಿಮೆ ಪರಿಹಾರ ದೊರೆತಿದ್ದರೆ ಅಥವಾ ಮುಂದಿನ ಕಂತಿನ ಹಣ ಪಡೆಯುವಲ್ಲಿ ತೊಂದರೆ ಎದುರಾದರೆ, ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಅನಗತ್ಯ ವಿಳಂಬವಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.