ಶಾಸಕ ಡಾ. ಮಂತರ್ ಗೌಡ ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ವಿ.ಪಿ. ಶಶಿಧರ್, ಕೃಷ್ಣೇಗೌಡ ಮತ್ತಿತರರು ಇದ್ದರು.  
ರಾಜ್ಯ

ರಂಗಮಂದಿರ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ

ಕುಶಾಲನಗರ: ಮುಖ್ಯಮಂತ್ರಿ ವಿಶೇಷ ಅನುದಾನದಡಿ ಕುಶಾಲನಗರ ತಾಲೂಕು ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆಗೆ ಗ್ಯಾಲರಿ ಹಾಗೂ ರಂಗಮಂದಿರ ನಿರ್ಮಾಣಕ್ಕಾಗಿ 20 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ತಿಳಿಸಿದ್ದಾರೆ. ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸವಾರ್ಂಗೀಣ ಬೆಳವಣಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಈ ಅನುದಾನ ಬಿಡುಗಡೆಯಾಗಿದೆ ಎಂದರು.
ಗ್ರಾಮೀಣ ಮಕ್ಕಳಿಗೆ ನಗರದ ಮಕ್ಕಳಿಗೆ ಸರಿಸಮನಾದ ವೇದಿಕೆ ಕಲ್ಪಿಸಿಕೊಡುವುದು ನನ್ನ ಆದ್ಯತೆ. ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದ ಈ ಅನುದಾನ ದೊರೆತಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ, ಗುಣಮಟ್ಟದಿಂದ ಪೂರ್ಣಗೊಳಿಸಲಾಗುವುದು. ಇದಕ್ಕೆ ಶಾಲೆಯ ಎಸ್‌ಡಿಎಂಸಿ ಹಾಗೂ ಶಿಕ್ಷಕರ ಸಹಕಾರ ಅಗತ್ಯ. ಈ ಯೋಜನೆ ಅಡಿಯಲ್ಲಿ ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ತೆರೆದ ಗ್ಯಾಲರಿ ಹಾಗೂ ಮಿನಿ ರಂಗಮಂದಿರ ನಿರ್ಮಾಣವಾಗಲಿದೆ. ಇದರಿಂದ ಶಾಲಾ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಕ್ರೀಡಾ ಚಟುವಟಿಕೆಗಳಿಗೆ ವೇದಿಕೆ ಲಭ್ಯವಾಗಲಿದೆ ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೃಷ್ಣೇಗೌಡ ಇತರರಿದ್ದರು.