Bengaluru ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿಯಂತಹ (Bengaluru) ಮಹಾನಗರದಲ್ಲಿ ದಿನದಿಂದ ದಿನಕ್ಕೆ ಜೀವನ ನಿರ್ವಹಣಾ ವೆಚ್ಚ ಏರಿಕೆಯಾಗುತ್ತಲೇ ಇದೆ. ಇತ್ತೀಚೆಗೆ ದಂಪತಿಯೊಬ್ಬರು ಬೆಂಗಳೂರಿನಲ್ಲಿ ತಮಗೆ ತಿಂಗಳಿಗೆ ಆಗುವ ವೆಚ್ಚದ ಸಂಪೂರ್ಣ ಲೆಕ್ಕಾಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಸಾಫ್ಟ್‌ವೇರ್ ದಂಪತಿಯ ಮಾಸಿಕ ಖರ್ಚು 1.7 ಲಕ್ಷ!
ಶುಭಿ ಖಂಡೇಲ್‌ವಾಲ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ತಾವು ಹಾಗೂ ಅವರ ಪತಿ ಸೇರಿ ಬೆಂಗಳೂರಿನಲ್ಲಿ ಪ್ರತಿತಿಂಗಳು ಸುಮಾರು 1.7 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಮನೆ ಬಾಡಿಗೆಯಿಂದ ಹಿಡಿದು ದಿನಸಿ ಹಾಗೂ ವಾರಾಂತ್ಯದ ಪ್ರವಾಸದವರೆಗಿನ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದಾರೆ.
ತಿಂಗಳ ವೆಚ್ಚದಲ್ಲಿ ಮನೆ ಬಾಡಿಗೆ ಹಾಗೂ ಪ್ರವಾಸಕ್ಕೆ!
ಅವರ ಇಡೀ ಖರ್ಚಿನ ಪಟ್ಟಿಯಲ್ಲಿ ಅತ್ಯಂತ ದೊಡ್ಡ ಮೊತ್ತ ಮನೆ ಬಾಡಿಗೆ ಮತ್ತು ಪ್ರವಾಸಕ್ಕೇ ವಿನಿಯೋಗವಾಗುತ್ತಿದೆ. ಆದಾಗ್ಯೂ, ತಿಂಗಳಿಗೆ ಸುಮಾರು 60,000 ರೂ. ಮನೆ ಬಾಡಿಗೆ ಅಪಾರ್ಟ್ಮೆಂಟ್ ನಿರ್ವಹಣೆಗೆ ಖರ್ಚಾಗುತ್ತಿದ್ದು, ನಗರದ ವಿವಿಧ ಸೊಸೈಟಿಗಳಿಗೆ ಅನುಗುಣವಾಗಿ ಬಾಡಿಗೆ ದರಗಳು ಬದಲಾಗುತ್ತವೆ ಎಂದು ತಿಳಿಸಿದ್ದಾರೆ. ಇನ್ನು ಪ್ರವಾಸವೇ ಇವರ ದೊಡ್ಡ ವೆಚ್ಚವಾಗಿದ್ದು, ವರ್ಷಕ್ಕೆ ಸುಮಾರು 9 ಲಕ್ಷ ರೂಪಾಯಿಗಳನ್ನು ಪ್ರವಾಸಕ್ಕಾಗಿಯೇ ಮೀಸಲಿಡುವುದಾಗಿ ತಿಳಿಸಿದ್ದಾರೆ.
ಆಹಾರ, ಸಹಾಯಕರು ಹಾಗೂ ವಾರಾಂತ್ಯದ ವಿನೋದದ ಲೆಕ್ಕಾಚಾರ
ಇನ್ನುಳಿದಂತೆ ದೈನಂದಿನ ದಿನಸಿ ಸಾಮಗ್ರಿಗಳಿಗೆ ತಿಂಗಳಿಗೆ 13-14 ಸಾವಿರ ವೆಚ್ಚವಾಗುತ್ತಿದ್ದು, ಇದರಲ್ಲಿ ವೇ ಪ್ರೋಟೀನ್, ಗ್ರೀಕ್ ಯೋಗರ್ಟ್ ಹಾಗೂ ಪನೀರ್‌ನಂತಹ ಅಧಿಕ ಪ್ರೋಟೀನ್ ಆಹಾರಗಳ ಪಾಲು ಹೆಚ್ಚಾಗಿದೆ. ಅಡುಗೆಯವರು ಮತ್ತು ಮನೆ ಕೆಲಸದಾಳಿಗೆ 8 ಸಾವಿರ ನೀಡಲಾಗುತ್ತಿದ್ದು, ವಾರಾಂತ್ಯದ ಹೊರಸಂಚಾರ ಹಾಗೂ ಊಟಕ್ಕಾಗಿ 10,000 ಖರ್ಚಾಗುತ್ತದೆ. ಇದರ ಜೊತೆಗೆ ಪೆಟ್ರೋಲ್ ಹಾಗೂ ಕ್ಯಾಬ್‌ಗೆ 3,500 ಮತ್ತು ಶಾಂಪಿಂಗ್ ಹಾಗೂ ಇತರ ವೈಯಕ್ತಿಕ ವೆಚ್ಚಗಳಿಗೆ 3,000 ಹೋಗುತ್ತದೆ ಎಂದು ಹೇಳಿದ್ದಾರೆ.
ಲೆಕ್ಕ ಇಡುವುದು ಸಾಲ ತೀರಿಸಲು ಅಲ್ಲ, ಸ್ಪಷ್ಟತೆಗಾಗಿ
ತಾವು ಮಾಡುತ್ತಿರುವ ಪ್ರತಿ ವೆಚ್ಚದ ಮೇಲೆ ನಿಗಾ ಇಡುವುದರ ಹಿಂದಿನ ಉದ್ದೇಶವನ್ನು ವಿವರಿಸಿರುವ ಶುಭಿ, "ನಮ್ಮ ಹಣ ಎಲ್ಲಿಗೆ ವೆಚ್ಚವಾಗುತ್ತಿದೆ ಎಂದು ತಿಳಿದುಕೊಂಡಾಗ ಯಾವುದೇ ಅಪರಾಧ ಪ್ರಜ್ಞೆ (Guilt) ಇಲ್ಲದೆ ನಮಗೆ ಇಷ್ಟವಾದ ವಿಷಯಗಳಿಗೆ ಖರ್ಚು ಮಾಡಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ.
ಆದರೆ ಈ ರೀತಿ ಲೆಕ್ಕವಿಡುವುದು ಗಂಡ-ಹೆಂಡತಿಯ ನಡುವೆ ಯಾರು ಯಾರಿಗೆ ಎಷ್ಟು ಬಾಕಿ ಇದ್ದಾರೆ ಎಂದು ಲೆಕ್ಕ ಹಾಕಲು ಅಲ್ಲ, ಬದಲಿಗೆ ಹಣಕಾಸಿನ ಸ್ಪಷ್ಟತೆಗಾಗಿ ಎಂದು ಅವರು ಬರೆದುಕೊಂಡಿದ್ದಾರೆ. ಪ್ರಸ್ತುತ ಈ ಪೋಸ್ಟ್ ಐಟಿ ನಗರದ ಬ್ಯುಸಿ ಹಾಗೂ ದುಬಾರಿ ಜೀವನ ಶೈಲಿಯ ಮೇಲೆ ಹೊಸ ಬೆಳಕು ಚೆಲ್ಲಿದೆ (ಏಜೆನ್ಸೀಸ್).