Rs 1,000 crore sanctioned for irrigation 
ರಾಜ್ಯ

ನೀರಾವರಿಗೆ 1 ಸಾವಿರ ಕೋಟಿ ರೂ. ಮಂಜೂರು

ಕುಣಿಗಲ್: ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಈಗಾಗಲೇ 1 ಸಾವಿರ ಕೋಟಿ ರೂ. ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಿ, ಲಿಂಕ್ ಕೆನಾಲ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶ್ರೀರಂಗ ಏತ ನೀರಾವರಿ ಯೋಜನಾ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಪ್ರಯೋಗಿಕವಾಗಿ ಹುತ್ರಿದುರ್ಗ ಹೋಬಳಿಯ 8 ಕೆರೆಗೆ ನೀರು ಹರಿಸಲಾಗಿದೆ ಎಂದು ಶಾಸಕ ಎಚ್.ಡಿ.ರಂಗನಾಥ್ ತಿಳಿಸಿದ್ದಾರೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಹೇಮಾವತಿ ಅಮೃತ್ 2.0 ಯೋಜನೆಯಡಿಯಲ್ಲಿ 10.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿ, ವೈ.ಜಿ.ಗುಡ್ಡದಿಂದ ಹುಲಿಯೂರುದುರ್ಗ ಹೋಬಳಿಯ 9 ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. 34 ಕೋಟಿ ರೂ. ವೆಚ್ಚದಲ್ಲಿ ಕೊತ್ತಿಗೆರೆ ಹೋಬಳಿಯ 22 ಕೆರೆ ತುಂಬಿಸುವ ಏತ ನೀರಾವರಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಉಳಿದ ಕಸಬಾ ಹೋಬಳಿಯ ಕೆರೆಗಳನ್ನು ತುಂಬಿಸುವ ಕೆಲಸ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದ್ದರು.
ಈ ಎಲ್ಲ ಕಾಮಗಾರಿ ಪೂರ್ಣಗೊಂಡರೆ ತಾಲೂಕಿನ ಎಲ್ಲ ಕೆರೆಕಟ್ಟೆಗಳು ಸದಾ ತುಂಬಿದ್ದು, ಅಂತರ್ಜಲ ಮಟ್ಟ ಸುಧಾರಣೆ ಆಗುವುದರ ಜತೆಗೆ ಜನಜಾನುವಾರುಗಳ ಕುಡಿಯುವ ನೀರು ಮತ್ತು ರೈತರ ಕೃಷಿಗೆ ಅನುಕೂಲವಾಗಲಿದೆ. 8 ವರ್ಷದಲ್ಲಿ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಭಾಗದ ಬಹುತೇಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಪಟ್ಟಣದ 23 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಪಟ್ಟಣವನ್ನು ಮಣ್ಣುಮುಕ್ತ ರಸ್ತೆ ಮಾಡುವುದಾಗಿ ಘೋಷಿಸಿದರು.