ಬೆಂಗಳೂರು:
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಕ್ರಮ ಹಣ ಹಂಚಿಕೆ ಮಾಡಿದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ಸಾಂವಿಧಾನಿಕ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಅಮೆರಿಕ ಮೂಲದ ದಿ ತಿಮೋಥಿ ಇನಿಶಿಯೇಟಿವ್ ಮಿಷನರಿ ಸಂಸ್ಥೆ ಸದಸ್ಯ ಫೇರ್ ವಕೈಜ್ ಜಾನ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ತನಿಖೆಯ ಮೇಲೆ ಪ್ರಭಾವ ಬೀರಲು ಮಾಡುವ ಇಂತಹ ಪ್ರಯತ್ನಗಳನ್ನು ಸಹಿಸಲಾಗದು ಎಂದು ಎಚ್ಚರಿಸಿದೆ.
ಆದರೆ, ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಸಂರಸಿಡಲು ಕೋರಿದ್ದ ಅರ್ಜಿದಾರನ ಮನವಿಯನ್ನು ಪರಿಗಣಿಸಿರುವ ನ್ಯಾಯಪೀಠ, ಈ ಸಂಬಂಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನಲೆ:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಷನರಿ ಸಂಸ್ಥೆಯ ಸದಸ್ಯ ಮೈಕಾ ಮಾರ್ಕ್ ಎಂಬಾತ 24 ಡೆಬಿಟ್ ಕಾರ್ಡ್ಗಳೊಂದಿಗೆ ಸಿಕ್ಕಿಬಿದ್ದಾಗ ಹಗರಣ ಬೆಳಕಿಗೆ ಬಂದಿತ್ತು. ಈ ವೇಳೆ ಆತನ ಜತೆಗಿದ್ದ ಫೇರ್ ವಕೈಜ್ ಜಾನ್ನನ್ನು ಕೂಡ ಜಾರಿ ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯು ಪಕ್ಷಪಾತ ಧೋರಣೆ ತಳೆದಿದ್ದು, ತಮ್ಮನ್ನು ಅಕ್ರಮವಾಗಿ 24 ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿದ್ದ ಜಾನ್ ಹೈಕೋರ್ಟ್ ಮೆಟ್ಟಿಲೇರಿದ್ದ. ಅಲ್ಲದೆ, ಈ ಸಂಬಂಧ ಸಿಜೆಐ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಹಣಕಾಸು ಸಚಿವರು ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದ.
⚠️
ಇ.ಡಿ. ಆರೋಪ ಏನಿದೆ?
ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಅಮೆರಿಕದ ಬ್ಯಾಂಕ್ನಿಂದ ನೀಡಲಾಗಿದ್ದ ಸಾವಿರಕ್ಕೂ ಅಧಿಕ ಡೆಬಿಟ್ ಕಾರ್ಡ್ಗಳನ್ನು ಸಂತೋಷ್ ಕುಮಾರ್ ಎಂಬ ನಕಲಿ ಹೆರಿನಲ್ಲಿ ಮುದ್ರಿಸಿ ನಿಯಮ ಉಲ್ಲಂಘಿಸಿ ದೇಶದಲ್ಲಿ ವಿತರಿಸಿದ್ದು ಪತ್ತೆಯಾಗಿತ್ತು. ಈ ಕಾರ್ಡ್ಗಳನ್ನು ಬಳಸಿ 92.55 ಕೋಟಿ ವಿದೇಶಿ ಹಣವನ್ನು ಎಟಿಎಂಗಳ ಮೂಲಕ ಅಕ್ರಮವಾಗಿ ಡ್ರಾ ಮಾಡಲಾಗಿತ್ತು. ಈ ಹಣವನ್ನು ಎಡಪಂಥೀಯ ಉಗ್ರಗಾಮಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಡ ಹೈಕೋರ್ಟ್ ಈ ಹಿಂದೆ ವಜಾಮಾಡಿತ್ತು.