ರಸ್ತೆ ಕಾಮಗಾರಿಗೆ 1 ಕೋಟಿ ರೂ. ಅನುದಾನ ಬಿಡುಗಡೆ road work
- ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿಕೆ
ಬೂದಿಕೋಟೆ: ಚತ್ತಗುಟ್ಟಳ್ಳಿಗೆ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು. road work
ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚತ್ತಗುಟ್ಟಳ್ಳಿ, ಕೊಲಮೂರು ಹಾಗೂ ಬೋಡಗುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೈಮಾಸ್ಟ್ ದೀಪ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಚತ್ತಗುಟ್ಟಳ್ಳಿಗೆ ರಸ್ತೆ ಸರಿಯಾಗಿಲ್ಲದ ಕಾರಣ ಸಾರಿಗೆ ಬಸ್ ಸಹ ಬರುತ್ತಿಲ್ಲ. ಹಾಗಾಗಿ ಸರ್ಕಾರದಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ವಾರದ ಒಳಗೆ ಪ್ರಾರಂಭಿಸಲಾಗುವುದು ಎಂದರು.
ದೇವರಗುಟ್ಟಳ್ಳಿ ರಸ್ತೆಗೂ ಸಹ ಸುಮಾರು ಎರಡು ಕೋಟಿ ರೂ. ಮಂಜೂರು ಮಾಡಲಾಗಿದ್ದು, ಈ ಗ್ರಾಮ ಗಡಿಭಾಗದಲ್ಲಿದ್ದರೂ ಎಲ್ಲ ಮೂಲ ಸೌಕರ್ಯ ಒದಗಿಸಲಾಗಿದೆ. ಕೊಲಮೂರು ಗ್ರಾಮದಲ್ಲಿ ಬಸ್ ನಿಲ್ದಾಣ, ಸಿಸಿ ರಸ್ತೆಗಳು, ಹೈಮಾಸ್ಟ್ ದೀಪ ದೇವಸ್ಥಾನದ ಅಭಿವೃದ್ಧಿಗೆ 2 ಲಕ್ಷ ರೂ. ಹಣ ನೀಡಲಾಗಿದೆ. ನಿಮ್ಮ ಗ್ರಾಮಕ್ಕೆ ಬೇಕಾದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಂಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿಗಳಾಗಿದ್ದರೂ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಮಸಮುದ್ರ ಗ್ರಾಪಂ ಆದಿನಾರಾಯಣ ಕುಟ್ಟಿ, ಸದಸ್ಯರಾದ ಕಾಶಿನಾಥ್, ಗಿರೀಶ್, ಸೋಮೊಜಿ ರಾವ್, ಸಂತೋಷ್ ರಾವ್, ಈಶ್ವರ್ ರಾವ್, ರಂಗನಾಥ ರಾವ್ ಶಾಮ್ ರಾವ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಕೆ ನಾರಾಯಣಸ್ವಾಮಿ, ಮುಖಂಡರಾದ ಚಂದು, ವೆಂಕಟೇಶ್ ಗೌಡ, ಬಲಮಂದೆ ನಾರಾಯಣಸ್ವಾಮಿ, ಕೇದಾರ್ ರಾವ್, ಕೇದಾರನಾಥ್ ಇದ್ದರು.