The Great Indian Crossroads
ವಿಜಯವಾಣಿ ಸುದ್ದಿಜಾಲ ಚಂಡೀಗಢ
ವಿಶ್ವ ಬೈಕ್ ದಿನಾಚರಣೆ ಅಂಗವಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆ ಆಯೋಜಿಸಿರುವ ವಿಶೇಷ The Great Indian Crossroads ಎಂಬ ವಿಶೇಷ ಕಾರ್ಯಕ್ರಮ ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡಯುತ್ತಿದೆ.
ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಪ್ರಮುಖ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರು ಈ ವಿಶೇಷ ರೈಡ್‌ನಲ್ಲಿ ಭಾಗವಹಿಸಿದ್ದು, ರಾಯಲ್ ಎನ್‌ಫೀಲ್ಡ್‌ನ ವಿವಿಧ ಮಾದರಿಯ ಬೈಕ್‌ಗಳಲ್ಲಿ ಚಂಡೀಗಢದಿಂದ ಥಿಯೋಗ್, ಕುಲ್ಲು, ಮಂಡಿ ಸೇರಿ ಹಿಮಾಲಯ ಪರ್ವತ ಶ್ರೇಣಿಯ ಹಲವು ಪ್ರದೇಶಗಳಿಗೆ ಸಂಚರಿಸಿ ಬೈಕ್ ರೈಡ್ ಮೋಜು ಅನುಭವಿಸಿದರು.
ಜೀವನ ಶೈಲಿ ಪರಿಚಯ: ಸುಮಾರು 730 ಕಿಲೋಮೀಟರ್ ದೂರದ ಈ ಯಾತ್ರೆಯು ಸುಂದರ ಹೆದ್ದಾರಿಗಳು, ಬೆಟ್ಟ ಪ್ರದೇಶಗಳ ಸವಾಲಿನ ಮಾರ್ಗಗಳು ಹಾಗೂ ಹಿಮಾಚಲದ ನೈಸರ್ಗಿಕ ಸೌಂದರ್ಯವನ್ನು ಪರಿಚಯಿಸಿತು. ರೈಡರ್‌ಗಳು ಶಿಮ್ಲಾ ಜಿಲ್ಲೆಯ ಥಿಯೋಗ್ ಪ್ರದೇಶದಲ್ಲಿ ಸ್ಥಳೀಯ ಜನಾಂಗದ ಸಾಂಪ್ರದಾಯಿಕ ಆಹಾರ, ಆತಿಥ್ಯ ಮತ್ತು ಜೀವನಶೈಲಿಯನ್ನು ಅನುಭವಿಸಿದರು.
ಸಾಹಸ ಚಟುವಟಿಕೆಗಳಿಗೆ ಮೆಚ್ಚುಗೆ: ಯಾತ್ರೆಯ ಭಾಗವಾಗಿ ಗ್ರೀನ್ ಹಬ್ ಫೆಲೋಶ್ಿ ವತಿಯಿಂದ ಪರಿಸರ ಸಂರಕ್ಷಣೆ, ಸಾಕ್ಷ್ಯಚಿತ್ರ ನಿರ್ಮಾಣ ಹಾಗೂ ಸುಸ್ಥಿರ ಪ್ರವಾಸೋದ್ಯಮ ಕುರಿತ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಹಾಸು ಗ್ರಾಮದ ಸಾಂಸ್ಕೃತಿಕ ಕಾರ್ಯಕ್ರಮ, ಸಾಂಪ್ರದಾಯಿಕ ಧಾಮ್ ಸಮುದಾಯ ಭೋಜನ, ಮಂಡಿಯ ಸಾಂಸ್ಕೃತಿಕ ಅನ್ವೇಷಣೆ ಹಾಗೂ ಕುಲ್ಲುವಿನ ಸಾಹಸ ಚಟುವಟಿಕೆಗಳು ಭಾಗವಹಿಸಿದವರ ಮೆಚ್ಚುಗೆಗೆ ಪಾತ್ರವಾದವು.
ಪರಿಸರ ಜಾಗೃತಿಯ ಆಶಯ: The Great Indian Crossroads ಕಾರ್ಯಕ್ರಮವು ಸಾಹಸಮಯ ಬೈಕ್ ಸವಾರಿಯ ಜತೆಗೆ ಭಾರತದ ವೈವಿಧ್ಯಮಯ ಸಂಸ್ಕೃತಿ, ಸಮುದಾಯ ಬಾಂಧವ್ಯ ಹಾಗೂ ಪರಿಸರ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಮೂಲಕ ದೇಶದ ವಿವಿಧ ಭಾಗಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮೀಪದಿಂದ ಅರಿಯುವ ಅವಕಾಶವನ್ನು ಭಾಗವಹಿಸಿದವರಿಗೆ ಕಲ್ಪಿಸಿಕೊಟ್ಟಿದೆ. ಈ ವಿಶೇಷ ಯಾತ್ರೆಯು ಬೈಕ್ ಪ್ರಿಯರು ಹಾಗೂ ಸಾಹಸ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮಾದರಿಯ ಕಾರ್ಯಕ್ರಮವಾಗಿ ಗಮನ ಸೆಳೆದಿದೆ.