ಹೊಸಕೋಟೆ / ಸೂಲಿಬೆಲೆ: ತಾಲೂಕಿನ ಸೂಲಿಬೆಲೆ ಠಾಣಾ ವ್ಯಾಪ್ತಿಯ ಮಾರುತಿನಗರದ ಮುಖ್ಯರಸ್ತೆಯಲ್ಲಿ ಶನಿವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಮಾರಾಕಾಸಗಳಿಂದ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಸೂಲಿಬೆಲೆಯ ಖಲೀಮ್ ಖಾನ್(45) ಮೃತ. ಖಲೀಮ್ನನ್ನು ರಸ್ತೆಯಲ್ಲಿ ಅಡ್ಡ ಹಾಕಿದ ದುಷ್ಕರ್ಮಿಗಳು ಆತನ ದೇಹದ 10ಕ್ಕೂ ಹೆಚ್ಚು ಕಡೆ ಮಾರಕಾಸ್ತ್ರಗಳಿಂದ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾರೆ. ಸೂಲಿಬೆಲೆ ಮಾರುತಿ ನಗರಕ್ಕೆ ಸಂಪರ್ಕ ಹೊಂದಿರುವ ರಸ್ತೆ ಬದಿಯಲ್ಲಿರುವ ಕಲ್ಯಾಣಿ ಮತ್ತು ಬ್ರಾಹ್ಮಣರ ಸ್ಮಶಾನದ ರಸ್ತೆಯಲ್ಲಿ ಶನಿವಾರ ತಡ ರಾತ್ರಿ ಈ ಕೃತ್ಯ ನಡೆದಿದೆ. ಖಲೀಮ್ ಖಾನ್ ಸೂಲಿಬೆಲೆ ಠಾಣೆಯಲ್ಲಿ ರೌಡಿ ಶೀಟರ್. ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಕ್ರಮ ಕ್ಯಾಟ್ ಪಿಶ್ ಸಾಕಣೆ ದಂಧೆ, ಕಸಾಯಿ ಖಾನೆಗೆ ಗೋವುಗಳ ಸಾಗಣೆ, ಗಾಂಜಾ ಸರಬರಾಜು ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಹಾಗೂ ಹಪ್ತಾ ವಸೂಲಿ ಮಾಡುತ್ತಿದ್ದ ಎಂದು ಸ್ಥಳಿಯರು ದೂರಿದ್ದಾರೆ.
ಕೊಲೆ ಪ್ರಕರರಣಕ್ಕೆ ಸಂಬಂಧಿಸಿದಂತೆ ಖಲೀಮ್ನ ವ್ಯವಹಾರ ಪಾಲುದಾರರು ಅಥವಾ ಆತನಿಂದ ಮೋಸಕ್ಕೊಳಗಾದವರು ಈ ಕೃತ್ಯ ಎಸಗಿರಬಹುದೆಂದು ಹೇಳಲಾಗುತ್ತಿದೆ.
ಯಾವ ಉದ್ದೇಶಕ್ಕೆ ಯಾರು ಹತ್ಯೆ ಮಾಡಿದ್ದಾರೆ ಎಂಬುದರ ಬಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಸೂಲಿಬೆಲೆ ಪೊಲೀಸರು ತಿಳಿಸಿದ್ದಾರೆ. ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸ್ಥಳಕ್ಕೆ ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.