ಕರ್ನಾಟಕ ಲೋಕಸೇವಾ ಆಯೋಗ  
ರಾಜ್ಯ

ಪರೀಕ್ಷಾ ಅಕ್ರಮ ತರಹೇವಾರಿ ಖಾತ್ರಿ ಇಲ್ಲ ನೌಕರಿ! ಸಾಲು ಸಾಲು ಅಕ್ರಮ ಹಿನ್ನೆಲೆ ಮರೆಯಾದ ಭರವಸೆ

ವಿದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋಣ ಎಂಬ ಕನಸು ಕಾಣುವವರು ‘ಟ್ರ್ಯಾಪ್​’ನಲ್ಲಿ ಸಿಲುಕಿ ಒದ್ದಾಡುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಯುವಕರಿಗೆ ಅರ್ಹತೆಗೆ ತಕ್ಕ ಉದ್ಯೋಗ ಖಾತ್ರಿ, ಜೀವನಭದ್ರತೆಯ ಆಶಾವಾದವೇ ಇಲ್ಲದಂತಾಗಿದೆ.

| ಕೀರ್ತಿನಾರಾಯಣ ಸಿ. ಬೆಂಗಳೂರು

ಸರ್ಕಾರಿ ಹುದ್ದೆಗಳ ಭರ್ತಿಗೆ ನಡೆಯುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲಿ ಸಾಲುಸಾಲು ಅಕ್ರಮಗಳು ಬಯಲಾಗುತ್ತಿರುವುದರಿಂದಾಗಿ ರಾಜ್ಯದಲ್ಲಿ ಅರ್ಹ ಅಭ್ಯರ್ಥಿಗಳಿಗೆ ‘ಸರ್ಕಾರಿ ನೌಕರಿ ಖಾತ್ರಿ’ ಇಲ್ಲ ಎನ್ನುವ ಪರಿಸ್ಥಿತಿ ನಿರ್ವಣವಾಗಿದೆ. ಇನ್ನೊಂದೆಡೆ ಸರ್ಕಾರಿ ಉದ್ಯೋಗದ ಸಹವಾಸವೇ ಬೇಡ, ವಿದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋಣ ಎಂಬ ಕನಸು ಕಾಣುವವರು ‘ಟ್ರ್ಯಾಪ್​’ನಲ್ಲಿ ಸಿಲುಕಿ ಒದ್ದಾಡುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಯುವಕರಿಗೆ ಅರ್ಹತೆಗೆ ತಕ್ಕ ಉದ್ಯೋಗ ಖಾತ್ರಿ, ಜೀವನಭದ್ರತೆಯ ಆಶಾವಾದವೇ ಇಲ್ಲದಂತಾಗಿದೆ.

ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಗೆ ನಡೆಯುತ್ತಿರುವ ಪ್ರತಿ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬರುತ್ತಿದೆ. ಕೆಲವೊಂದು ಪರೀಕ್ಷೆಗಳ ಅಕ್ರಮದಲ್ಲಿ ಭಾಗಿಯಾಗಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳೂ ಸೇರಿ ಉನ್ನತ ಅಧಿಕಾರಿಗಳೇ ಜೈಲುಪಾಲಾಗಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗದ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ಪರೀಕ್ಷೆಗಳಲ್ಲಿ ನಡೆದಿದ್ದ ಬೃಹತ್ ಹಗರಣದ ಬಳಿಕ ಬಹಿರಂಗವಾಗಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅತಿದೊಡ್ಡ ಪರೀಕ್ಷಾ ನೇಮಕಾತಿ ಹಗರಣ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕಿದೆ.

ಜೈಲಿಗೆ ಹೋದ ಪ್ರಮುಖರು

  • ಪಿಎಸ್​ಐ ಹಗರಣದಲ್ಲಿ ಐಪಿಎಸ್ ಅಧಿಕಾರಿ, ಎಡಿಜಿಪಿ ಅಮೃತ್ ಪೌಲ್

  • ಇದೇ ಪ್ರಕರಣದಲ್ಲಿ ಇಬ್ಬರು ಡಿವೈಎಸ್ಪಿ, ಕೆಲವು ಪೊಲೀಸ್ ಇನ್​ಸ್ಪೆಕ್ಟರ್​ಗಳು

  • ಕೆಪಿಎಸ್ಸಿ ಹಗರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಗಂಗ್ವಾರ್

  • ಕೆಪಿಎಸ್ಸಿ ಮಾಜಿ ಅಧ್ಯಕ್ಷ, ಸದಸ್ಯರೂ ಅಕ್ರಮದಲ್ಲಿ ಭಾಗಿ ಆಗಿರುವ ಆರೋಪ

ಪ್ರಮುಖ ನೇಮಕಾತಿ ಹಗರಣಗಳು

  • ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ 400 ಹುದ್ದೆ ನೇಮಕಾತಿ ಅವ್ಯವಹಾರ

  • ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ಭರ್ತಿ

  • ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಗಂಗ್ವಾರ್, ಮಧ್ಯವರ್ತಿ ಸೆರೆ

  • 545 ಪಿಎಸ್​ಐ ಹುದ್ದೆ ಅಕ್ರಮ, ಐಪಿಎಸ್, ಡಿವೈಎಸ್ಪಿ ಸೇರಿ 100ಕ್ಕೂ ಹೆಚ್ಚು ಬಂಧನ

  • ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ

  • ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲೂ ಅಕ್ರಮ

  • ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಹುದ್ದೆ ನೇಮಕ

ಪರೀಕ್ಷಾ ಅಕ್ರಮ ಹೇಗೆ?

  • ಅರ್ಜಿ ಹಾಕುವ ಅಭ್ಯರ್ಥಿಗಳನ್ನು ಮಧ್ಯವರ್ತಿ ಮೂಲಕ ಸಂರ್ಪಸುವುದು

  • ಇಂತಿಷ್ಟು ಹಣ ಕೊಟ್ಟರೆ ಹುದ್ದೆಗೆ ಆಯ್ಕೆ ಖಚಿತ ಎಂದು ನಂಬಿಸಿ ಡೀಲ್

  • ಪರೀಕ್ಷೆ ಹಿಂದಿನ ದಿನವೇ ಪ್ರಶ್ನೆಪತ್ರಿಕೆಯನ್ನು ಅಭ್ಯರ್ಥಿಗಳ ಕೈಗೆ ಕೊಡುವುದು

  • ರೆಸಾರ್ಟ್ ಅಥವಾ ನಿಗದಿತ ಸ್ಥಳಕ್ಕೆ ಅಭ್ಯರ್ಥಿ ಕರೆಸಿ ಉತ್ತರ ಹೇಳುವುದು

  • ಸ್ಟ್ರಾಂಗ್ ರೂಂಗೆ ಹೋಗಿ ಓಎಂಆರ್ ಶೀಟ್​ಗಳಲ್ಲಿ ಉತ್ತರ ಬರೆಯುವುದು

ವಿದೇಶಿ ಉದ್ಯೋಗ!

ಸಾಗರೋತ್ತರ ದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಅಮಾಯಕರನ್ನು ಅಲ್ಲಿಗೆ ಕಳುಹಿಸಿ ಟ್ರ್ಯಾಪ್​ ಮಾಡುತ್ತಿರುವ ಜಾಲ ಸಕ್ರಿಯವಾಗಿವೆ. 2025ರಲ್ಲಿ ವಿದೇಶಿ ಉದ್ಯೋಗ ಜಾಲದಲ್ಲಿ ಸಿಲುಕಿಕೊಂಡಿದ್ದ 4315 ಭಾರತೀಯ ಪ್ರಜೆಗಳನ್ನು ರಕ್ಷಿಸಿ ಕರೆತರಲಾಗಿದೆ. ವಂಚಕರ ಜಾಲಕ್ಕೆ ಸಿಲುಕುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಮಿತಿಮೀರುತ್ತಿದೆ.