ಕಕ ಹೋರಾಟ ಸಮಿತಿಯ ಬಸವರಾಜ ದೇಶಮುಖ, ಲಕ್ಷ್ಮಣ ದಸ್ತಿ ಮಾಹಿತಿ 
ರಾಜ್ಯ

ಕಲಬುರಗಿಯಲ್ಲಿ ದುಂಡು ಮೇಜಿನ ಸಭೆ 11ರಂದು

ಕಲಬುರಗಿ: ನಂಜುಂಡಪ್ಪ ವರದಿಯ ಮಾನದಂಡದಂತೆ, ಸರ್ಕಾರದಿಂದ ಅಧಿಕೃತವಾಗಿ ರಚನೆಗೊಂಡಿರುವ ಗೋವಿಂದರಾವ ನೇತೃತ್ವದ ಪ್ರಾದೇಶಿಕ ಅಸಮತೋಲನಾ ಸಮಿತಿಯ ವರದಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಕಾಲಮಿತಿಯ ಪ್ರಗತಿಯ ಕುರಿತು ಚರ್ಚಿಸಲು ಆ.11ರಂದು ಬೆಳಗ್ಗೆ 11.30ಕ್ಕೆ ಶರಣಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಕ ಭಾಗದ ಏಳು ಜಿಲ್ಲೆಗಳ ಗಣ್ಯರ, ತರ, ಚಿಂತಕರ ದುಂಡು ಮೇಜಿನ ಸಭೆಯ ಆಯೋಜಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಎಸ್​.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಂಜುಂಡಪ್ಪ ನೇತೃತ್ವದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ರಚಿಸಲಾಗಿತ್ತು. ಈ ಸಮಿತಿ 2002ರಲ್ಲಿ ಸುಮಾರು 1216 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಸಿತ್ತು. ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅತ್ಯಂತ ಹಿಂದುಳಿದ, ಹೀನಾಯ ಸ್ಥಿತಿಯಲ್ಲಿರುವ ಬಗ್ಗೆ ಅಂಕಿ ಅಂಶಗಳ ಸಹಿತ ತಿಳಿಸಿತ್ತು. ಸುಮಾರು 24 ವರ್ಷ ಗತಿಸಿದರೂ ನಂಜುಂಡಪ್ಪ ಸಮಿತಿ ಶಿಫಾರಸಿನ ಸೂಚ್ಯಂಕಗಳಂತೆ ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಂಡರೂ ಕಲ್ಯಾಣ ಕರ್ನಾಟಕ ಸೇರಿ ಕರ್ನಾಟಕದ ಬಹುತೇಕ ತಾಲೂಕುಗಳು ಅತ್ಯಂತ ಹಿಂದುಳಿದ ಸ್ಥಾನದಲ್ಲಿಯೇ ನಿಂತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಳೆದ ವರ್ಷ ಗೋವಿಂದರಾವ ನೇತೃತ್ವದಲ್ಲಿ ನೂತನ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ರಚನೆ ಮಾಡಿತ್ತು. ಸರ್ಕಾರದ ನಿರ್ದೇಶನದಂತೆ ಸಮಿತಿ ಕಳೆದ ಆರು ತಿಂಗಳ ಪೂರ್ವದಲ್ಲಿಯೇ ವರದಿ ನೀಡಿದೆ ಎಂದು ಹೇಳಿದ್ದಾರೆ.
ನಂಜುಂಡಪ್ಪ ವರದಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಒಟ್ಟು ಜಿಲ್ಲೆಗಳಲ್ಲಿ 21 ತಾಲೂಕು ಅತ್ಯಂತ ಹಿಂದುಳಿದ ಸ್ಥಾನದಲ್ಲಿದ್ದವು. ಪ್ರಸ್ತುತ ಗೋವಿಂದರಾವ ಸಮಿತಿ ವರದಿಯಲ್ಲಿ ಕಲ್ಯಾಣದ 50 ತಾಲೂಕುಗಳಲ್ಲಿ 39 ತಾಲೂಕು ಅತ್ಯಂತ ಹಿಂದುಳಿದ ಸ್ಥಾನದಲ್ಲಿವೆ. ಮಾನವ ಅಭಿವೃದ್ಧಿ ಸೂಚ್ಯಂಕ 91ರಿಂದ 94ಕ್ಕೆ ಏರಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿ ಕಾಲಮಿತಿಯ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.