Rona Crime | ಬುದ್ಧಿಮಾಂದ್ಯ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ! 
ರಾಜ್ಯ

ಬುದ್ಧಿಮಾಂದ್ಯ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ!...ಸಂತ್ರಸ್ತೆ 6 ತಿಂಗಳ ಗರ್ಭಿಣಿ: ಕಾಮುಕ ಕೊನೆಗೂ ಅಂದರ್​

ಗದಗ: ಚಾಕೊಲೇಟ್ ಆಮಿಷ ಒಡ್ಡಿ 19 ವರ್ಷದ ಬುದ್ಧಿಮಾಂದ್ಯ ಯುವತಿಯ ಮೇಲೆ ದೌರ್ಜನ್ಯ ಎಸಗಿದ ಪರಿಣಾಮ ಸಂತ್ರಸ್ತೆ ಗರ್ಭಿಣಿಯಾದ ದಾರುಣ ಘಟನೆಯೊಂದು ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಆರೋಪಿ ದುರಗಪ್ಪ ಭರಮಪ್ಪ ಮಾದರ (28) ಎಂಬಾತನನ್ನು ರೋಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿ ಒಂದೇ ಗ್ರಾಮದವರಾಗಿದ್ದು, ಆರೋಪಿಗೆ ಇನ್ನೂ ಮದುವೆಯಾಗಿರಲಿಲ್ಲ. ಯುವತಿಯ ಮನೋವೈಕಲ್ಯವನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ಚಾಕೊಲೇಟ್ ನೀಡಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇತ್ತೀಚೆಗೆ ಸಂತ್ರಸ್ತೆಯ ದೇಹದಲ್ಲಿ ಉಂಟಾದ ಬದಲಾವಣೆಗಳನ್ನು ಗಮನಿಸಿದ ಗ್ರಾಮದ ಮಹಿಳೆಯರು, ಆಕೆ ಗರ್ಭ ಧರಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗಾಬರಿಗೊಂಡ ಆರೋಪಿ, ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳ ಮೂಲಕ ಸಂತ್ರಸ್ತೆಯ ಕುಟುಂಬಕ್ಕೆ ಆಮಿಷ ಒಡ್ಡಿದ್ದಾನೆ. ಗರ್ಭಪಾತ ಮಾಡಿಸುವ ಉದ್ದೇಶದಿಂದ ಸಂತ್ರಸ್ತೆಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದನು. ಆದರೆ, ಈ ಹಂತದಲ್ಲಿ ಗರ್ಭಪಾತ ಮಾಡಿಸಿದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ ವೈದ್ಯರು, ಗರ್ಭಪಾತ ಮಾಡಲು ನಿರಾಕರಿಸಿದ್ದರು.
ಗರ್ಭಪಾತದ ಯತ್ನ ವಿಫಲವಾದ ಬಳಿಕ, ಪ್ರಭಾವಿಗಳ ನೆರವಿನಿಂದ ಸಂತ್ರಸ್ತೆಯ ತಾಯಿಗೆ 50,000 ರೂಪಾಯಿ ಹಣ ನೀಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಯತ್ನಿಸಿದ್ದನು. ಕಳೆದ ಒಂದೂವರೆ ತಿಂಗಳಿನಿಂದ ಈ ಕುರಿತು ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದೆ.

ಯುವಕರ ಜಾಗೃತಿಯಿಂದ ಬೆಳಕಿಗೆ ಬಂದ ಸತ್ಯ

ಅಮಾಯಕಿ ಮೇಲೆ ನಡೆದ ದೌರ್ಜನ್ಯ ಮತ್ತು ಪ್ರಭಾವಿಗಳ ಅಕ್ರಮ ಯತ್ನವನ್ನು ಗಮನಿಸಿದ ಗ್ರಾಮದ ಕೆಲ ಯುವಕರು, ರೋಣ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿದ್ದರು. ಯುವಕರ ಮನವಿಗೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಸಂತ್ರಸ್ತೆಗೆ ಸಾಂತ್ವನ ಹೇಳಿದರು. ಜುಲೈ 6 ರಂದು ಆಕೆಯನ್ನು ಗದಗ ಜಿಮ್ಸ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಯುವತಿ 6 ತಿಂಗಳ ಗರ್ಭಿಣಿಯಾಗಿರುವುದು ಖಚಿತವಾಯಿತು. ವೈದ್ಯರು ಈ ಮಾಹಿತಿಯನ್ನು ಗದಗ ಜಿಲ್ಲಾ ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕರಿಗೆ ರವಾನಿಸಿದರು.

ಪೊಲೀಸ್ ದೂರು ಮತ್ತು ತನಿಖೆ

ಘಟನೆ ದೃಢಪಡುತ್ತಿದ್ದಂತೆ ಅಧಿಕಾರಿಗಳ ಪ್ರವೇಶದಿಂದಾಗಿ ಪ್ರಭಾವಿಗಳ ಯತ್ನ ವಿಫಲವಾಯಿತು. ಪೊಲೀಸರು ಮಂಗಳವಾರ ರಾತ್ರಿ ಸಂತ್ರಸ್ತೆಯ ತಾಯಿಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಸಂತ್ರಸ್ತೆಯನ್ನು ಹೆಚ್ಚಿನ ಆರೈಕೆಗಾಗಿ ಗದಗ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ. ರೋಣ ಪೊಲೀಸರು ಆರೋಪಿ ದುರಗಪ್ಪನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಪ್ರಮುಖ ಆರೋಪಿಯ ಹೆಸರು ಮಾತ್ರ ಸೇರಿಸಿ, ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಉಳಿದ ನಾಲ್ವರು ಪ್ರಭಾವಿಗಳ ಹೆಸರನ್ನು ಕೈಬಿಟ್ಟಿರುವುದು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.