Samskruthika saurabha programme  
ರಾಜ್ಯ

ಜಾನಪದ ಕಲೆಗಳ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದು - ಡಾ. ಗೊಲ್ಲಹಳ್ಳಿ ಶಿವಪ್ರಸಾದ್

ಪ್ರಮುಖ ಮುಖ್ಯಾಂಶಗಳು

  • * ಕರ್ನಾಟಕದ ಕಲೆಸಂಸ್ಕೃತಿಯ ವೈಭವ ಅನಾವರಣಗೊಳಿಸಿದ ಸಾಂಸ್ಕೃತಿಕ ಸೌರಭ

ಬೆಂಗಳೂರು:

ಜಾನಪದ ಕಲೆಗಳು ಕೇವಲ ಮನರಂಜನೆಯ ಸಾಧನಗಳಲ್ಲ ಅವು ನಾಡಿನ ಜನಜೀವನ, ಆಚಾರವಿಚಾರ, ನಂಬಿಕೆ, ಸಂಪ್ರದಾಯ ಮತ್ತು ಸಾಮಾಜಿಕ ಬದುಕಿನ ಜೀವಂತ ದಾಖಲೆಗಳು. ಆಂತಹ ಜಾನಪದ ಕಲೆಗಳ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಕರ್ನಾಟಕದ ಶ್ರೀಮಂತ ಕಲೆ, ಜಾನಪದ ಪರಂಪರೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಪ್ರತಿಯೊಂದು ಜಾನಪದ ಕಲಾ ಪ್ರಕಾರದ ಹಿಂದೆ ಒಂದು ಜನಸಮುದಾಯದ ಬದುಕು, ಅನುಭವ ಮತ್ತು ಪರಂಪರೆ ಅಡಗಿದೆ. ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ ಯುವಜನರು ಜಾನಪದ ಕಲೆಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬೇಕು. ಕಲೆ ಮತ್ತು ಸಂಸ್ಕೃತಿಯನ್ನು ಪುಸ್ತಕಗಳಲ್ಲಿ ಓದುವುದಕ್ಕಿಂತ ಕಲಾವಿದರ ಮೂಲಕ ನೇರವಾಗಿ ಅನುಭವಿಸಿದಾಗ ಅದರ ಮೌಲ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು.
ಶಿಕ್ಷಣದ ಜತೆಗೆ ಸಾಂಸ್ಕೃತಿಕ ಅರಿವು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕಲ್ ಎನ್. ಚಲವಾದಿ ಮಾತನಾಡಿ, ಇಲಾಖೆಯು ರಾಜ್ಯದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಕಲಾ ಪ್ರಕಾರಗಳನ್ನು ನೇರವಾಗಿ ವೀಕ್ಷಿಸುವುದರಿಂದ ರಾಜ್ಯದ ಸಾಂಸ್ಕೃತಿಕ ವೈವಿಧ್ಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕ ಅರಿವು ಬೆಳೆಸುವುದು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಎಂದು ಹೇಳಿದರು.
ಇದೇ ವೇಳೆ ವಾಣಿಜ್ಯ ವೈಭವ ಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು. ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ಮ್ಯಾನೇಜರ್ ಫಾ. ಥಾಮಸ್ ಚಕ್ರಮಾಕ್ಕಿಲ್, ಸಂಸ್ಥೆಯ ಪ್ರಾಂಶುಪಾಲರಾದ ಫಾ. ಡಾ. ಆಂಟನಿ ಡೇವಿಸ್,ಸಿಎಂಐ ಜಂಟಿ ನಿರ್ದೇಶಕ ಫಾ. ಡಾ. ಜಾಯ್ ಪಯಾಪಳ್ಳಿ, ಫಾ. ಲೆಬಿನ್ ಡೇವಿಸ್, ಫಾ. ಲಿಂಟೋ ಥಾಮಸ್, ಉಪ ಪ್ರಾಂಶುಪಾಲ ಡಾ. ಕೆ. ಎಂ. ವಿನಯ್ ಕುಮಾರ್ ಇತರರು ಇದ್ದರು.