ಬೆಂಗಳೂರು : ವೈದ್ಯಕೀಯ ಚಿಕಿತ್ಸೆಯನ್ನು ಮತ್ತಷ್ಟು ಸುಧಾರಿಸುವ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬನೆಕಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಆರ್‌ಆರ್‌ಎಂಸಿಎಚ್) ತನ್ನ ರೋಬಾಟಿಕ್ ಸರ್ಜರಿ (ಯಂತ್ರೋಪಕರಣ ಶಸ್ತ್ರಚಿಕಿತ್ಸೆ) ವಿಭಾಗವನ್ನು ಉದ್ಘಾಟಿಸಿದೆ.
ರೋಗಿಗಳಿಗೆ ಅತ್ಯಾಧುನಿಕ ಮತ್ತು ನಿಖರವಾದ ವೈದ್ಯಕೀಯ ತಂತ್ರಜ್ಞಾನವನ್ನು ತಲುಪಿಸುವ ಸಂಸ್ಥೆಯ ಬದ್ಧತೆಯಲ್ಲಿ ರೋಬಾಟಿಕ್ ಸರ್ಜರಿ ವಿಭಾಗ ಒಂದು ಪ್ರಮುಖ ಮೈಲುಗಲ್ಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂಸ್ಥಾಪಕ ಕುಲಪತಿ ಡಾ.ಎ.ಸಿ. ಷಣ್ಮುಗಮ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಭಗವಾನ್, ರೋಬೋಟಿಕ್ ಶಸ್ತ್ರಚಿಕಿತ್ಸೆಯ ಪರಿಚಯದಿಂದ ವಿದ್ಯಾರ್ಥಿಗಳಿಗೆ ಕಲಿಯಲು ಉತ್ತಮ ಅವಕಾಶಗಳು ಹಾಗೂ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆ ಸಿಗಲಿದೆ. ಈ ಮೈಲುಗಲ್ಲಿನ ಮತ್ತೊಂದು ವಿಶೇಷತೆಯೆಂದರೆ, ಇದು ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಕಲ್ಪನೆಗೆ ಪೂರಕವಾಗಿದೆ. ರೋಬಾಟಿಕ್ ಸರ್ಜರಿಯ ಉದ್ಘಾಟನೆಯೊಂದಿಗೆ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಭಾರತೀಯ ವೈದ್ಯಕೀಯ ಶ್ರೇಷ್ಠತೆಯು ತಾಂತ್ರಿಕ ನಾವೀನ್ಯತೆಯೊಂದಿಗೆ ಸೇರುವ ಮೂಲಕ ನಮ್ಮ ದೇಶದ ಆರೋಗ್ಯ ಕ್ಷೇತ್ರದ ಪ್ರಮುಖ ಭಾಗವಾಗುವ ಭವಿಷ್ಯದತ್ತ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ ಎಂದರು. ಸಂಸ್ಥಾಪಕ ಕುಲಪತಿಗಳ ದೂರದೃಷ್ಟಿಯನ್ನು ಇದೇ ವೇಳೆ ಭಗವಾನ್ ಪ್ರಶಂಸಿಸಿದರು.