ವಿಜಯಪುರ ಹೋಬಳಿಯ ವೆಂಕಟಗಿರಿ ಕೋಟೆ ಬಳಿ ನಡೆದ ದರೋಡೆ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ವಿಜಯಪುರ: ಹೋಬಳಿಯ ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿ ಕೋಟೆ ಬಳಿಯ ಖಾಸಗಿ ಲೇಔಟ್ನಲ್ಲಿ ಬುಧವಾರ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿದ ದರೋಡೆಕೋರರು, ಆಂಧ್ರಪ್ರದೇಶದಿಂದ ಇಬ್ಬರನ್ನು ಕರೆಸಿಕೊಂಡು ಹಲ್ಲೆ ನಡೆಸಿ 20 ಲಕ್ಷ ರೂ. ನಗದು ದೋಚಿದ್ದಾರೆ.
ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ವಂಚನೆ ಜಾಲಕ್ಕೆ ಸಿಲುಕಿದವರು. ಕುಮಾರ್ ಎಂಬಾತ ಆಂಧ್ರಪ್ರದೇಶ ಮೂಲದ ವಿಶ್ವ ಪ್ರಸಾದ ರೆಡ್ಡಿ ಎಂಬುವರಿಗೆ ದೂರವಾಣಿ ಕರೆ ಮಾಡಿ ಕಡಿಮೆ ಬೆಲೆಗೆ 1 ಕೆಜಿ ಚಿನ್ನ ಕೊಡುವುದಾಗಿ ಹೇಳಿದ್ದಾನೆ.ಚಿನ್ನದ ಆಸೆಗೆ ಬಿದ್ದು ಅಲ್ಲಿಂದ ವಿಶ್ವ ಪ್ರಸಾದ್ ರೆಡ್ಡಿ, ಸ್ನೇಹಿತನೊಂದಿಗೆ ಬಂದಿದ್ದಾರೆ. ಆರು ಮಂದಿ ಇದ್ದ ದರೋಡೆಕೋರರು ಇಬ್ಬರಿಗೂ ತಲೆಗೆ ಹೊಡೆದು 20 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ. ವಿಶ್ವಪ್ರಸಾದ್ ರೆಡ್ಡಿ, ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ ಪಿ ಚಂದ್ರಕಾಂತ್, ದೊಡ್ಡಬಳ್ಳಾಪುರ ಡಿಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಪ್ರಶಾಂತ್ ನಾಯಕ್ ಅವರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.