ದೊಡ್ಡಬಳ್ಳಾಪುರದಲ್ಲಿ ಹಣ ದರೋಡೆ ಮಾಡಿದ್ದ ಐವರನ್ನು ಬಂಧಿಸಿ ಕೋರ್ಟ್ಗೆ ಕರೆದೊಯ್ಯುತ್ತಿರುವ ಗ್ರಾಮಾಂತರ ಠಾಣೆ ಪೊಲೀಸರು.
ದೊಡ್ಡಬಳ್ಳಾಪುರ : ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮತ್ತಷ್ಟು ಮದ್ಯ ಸೇವಿಸಲು ಹಣವಿಲ್ಲದೆ, ಕಾಲೇಜು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಐವರು ಕಿಡಿಗೇಡಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸೊಣ್ಣಪ್ಪನಹಳ್ಳಿ ಕಾರ್ಖಾನೆಯ ಆನಂದ್ ಕುಮಾರ್ (25), ತಿಲಕ್ (19) ಮುನೇಗೌಡ (21), ಗಾರೆ ಕೆಲಸಗಾರ ಆಕಾಶ್ (21) ಗೌತಮ್ (23) ಬಂಧಿತರು. ಕೋಲಾರದ ಮಾಲೂರು ಮೂಲದ ಅಯ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಾ.10ರಂದು ರಾತ್ರಿ ಸ್ನೇಹಿತನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆರು ಮಂದಿ ಪ್ರತಿಷ್ಠಿತ ಖಾಸಗಿ ಕಾಲೇಜು ಹಿಂಭಾಗ ಪಾರ್ಟಿ ಮಾಡಲು ಸೇರಿದ್ದರು. ತಂದಿದ್ದ ಮದ್ಯ ಮುಗಿದ ಮೇಲೆ ಮತ್ತಷ್ಟು ಕುಡಿಯಲು ಇಚ್ಛಿಸಿದ್ದು, ಆದರೆ, ಹಣವಿರಲಿಲ್ಲ. ಹೇಗಾದರೂ ಮಾಡಿ ಹಣ ಹೊಂದಿಸಿ ಮದ್ಯ ಸೇವಿಸಲೇಬೇಕು ಎಂದು ನಿರ್ಧರಿಸಿದ ದುರುಳರು, ರಾತ್ರಿ 12.40ರ ಸುಮಾರಿಗೆ ಕಾಲೇಜು ಬಳಿಯ ಹೈವೇಗೆ ಬಂದಿದ್ದರು. ಅದೇ ಸಮಯದಲ್ಲಿ ಕೆಲಸದ ನಿಮಿತ್ತ ಪಿಜಿಯಿಂದ ಹೊರಬಂದಿದ್ದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಈ ತಂಡ ಅಡ್ಡಗಟ್ಟಿದೆ. ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಹಾಗೂ ನಗದು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬಲವಂತವಾಗಿ ಆನ್ಲೈನ್ ಮೂಲಕವೂ ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದರು.
ಘಟನೆ ಸಂಬಂಧ ಮಾ. 11ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸ್ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ತಣ ಕಾರ್ಯಪ್ರವೃತ್ತರಾಗಿ, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.