’ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’
- ಭಾರತದ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ’ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’ ಈ ಬಾರಿಯ ಪ್ರವಾಸಿ ಋತುವನ್ನು ಮತ್ತಷ್ಟು ವರ್ಣರಂಜಿತವಾಗಿಸಿದೆ.
- ಈ ಕಲಾ ಹಬ್ಬವು ಕಲೆ, ಇತಿಹಾಸ ಮತ್ತು ಪ್ರವಾಸೋದ್ಯಮವನ್ನು ಬೆಸೆಯುವ ಮೂಲಕ ಪ್ರವಾಸಿಗರಿಗೆ ಅನನ್ಯ ಅನುಭವವನ್ನು ನೀಡುತ್ತಿದೆ
- ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಈ ಕಲಾ ಉತ್ಸವವು ಮಾ.31ರವರೆಗೆ ಮುಂದುವರಿಯಲಿದೆ.
ಬೆಂಗಳೂರು: ಮುಂಬರುವ ಬೇಸಿಗೆ ರಜೆಗೆ ಕೇರಳದ ಪ್ರೇಕ್ಷಣೀಯ ಸ್ಥಳಗಳತ್ತ ಸೆಳೆಯಲು ಮುಂದಾಗಿರುವ ಕೇರಳ ಪ್ರವಾಸೋದ್ಯಮ ಇಲಾಖೆಯು ದೇಶಾದ್ಯಂತ ರೋಡ್ ಶೋ, ಕಲಾ ವೈಭವವನ್ನು ಪ್ರದರ್ಶಿಸುತ್ತಿದೆ.
ಭಾರತದ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ’ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’ ಈ ಬಾರಿಯ ಪ್ರವಾಸಿ ಋತುವನ್ನು ಮತ್ತಷ್ಟು ವರ್ಣರಂಜಿತವಾಗಿಸಿದೆ. ಸಮಕಾಲೀನ ಕಲೆಗೆ ಜಾಗತಿಕ ವೇದಿಕೆಯಾಗಿರುವ ಕೊಚ್ಚಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಸಾಂಸ್ಕೃತಿಕವಾಗಿ ಮರುಹುಟ್ಟು ಪಡೆಯುತ್ತದೆ. ಕೊಚ್ಚಿ ಕೋಟೆಯ ಐತಿಹಾಸಿಕ ಮತ್ತು ಪಾರಂಪರಿಕ ಪರಿಸರದಲ್ಲಿ ನಡೆಯುತ್ತಿರುವ ಈ ಕಲಾ ಹಬ್ಬವು ಕಲೆ, ಇತಿಹಾಸ ಮತ್ತು ಪ್ರವಾಸೋದ್ಯಮವನ್ನು ಬೆಸೆಯುವ ಮೂಲಕ ಪ್ರವಾಸಿಗರಿಗೆ ಅನನ್ಯ ಅನುಭವವನ್ನು ನೀಡುತ್ತಿದೆ.
ಈ ಸಂಬಂಧ ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇರಳ ವಾರ್ತಾ ಇಲಾಖೆ ಅಧಿಕಾರಿ ಬಾಬು ಮಹೇಂದ್ರ, ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಈ ಕಲಾ ಉತ್ಸವವು ಮಾ.31ರವರೆಗೆ ಮುಂದುವರಿಯಲಿದೆ. ವಿಶ್ವದ ಮೂಲೆಮೂಲೆಗಳ ಕಲಾವಿದರ ಅತ್ಯಾಧುನಿಕ ಕಲಾಕೃತಿಗಳು ಇಲ್ಲಿನ ಪಾರಂಪರಿಕ ತಾಣಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕಲೆಯನ್ನೇ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿಸಿಕೊಂಡಿರುವ ಈ ಉತ್ಸವವು, ಕೊಚ್ಚಿಯನ್ನು ಇತಿಹಾಸ ಮತ್ತು ಸೃಜನಶೀಲತೆಯ ಸಂಗಮ ತಾಣವನ್ನಾಗಿ ಮರುರೂಪಿಸಿದೆ ಎಂದು ಹೇಳಿದರು.
ಮುಂಬರುವ ಬೇಸಿಗೆ ರಜೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ’ಕೇರಳ ಟೂರಿಸಂ’ ದೇಶದ ಪ್ರಮುಖ ನಗರಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಿದೆ. ಜ.20ರಂದು ಚೆನ್ನೈನಲ್ಲಿ ಆರಂಭವಾದ ಈ ಅಭಿಯಾನವು ಗುರುವಾರ ಬೆಂಗಳೂರಿನಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಹೈದರಾಬಾದ್, ಕಲ್ಕತ್ತಾ, ಲಕ್ನೋ ಮತ್ತು ಇಂದೋರ್‌ಗಳಲ್ಲಿ ನಡೆಸಲಾಗುತ್ತದೆ ಎಂದು ಹೇಳಿದರು.
ಇದರ ಜತೆಗೆ ’ಲೆನ್ಸ್‌ಸ್ಕೇಪ್ ಕೇರಳ’ ಛಾಯಾಚಿತ್ರ ಪ್ರದರ್ಶನವು ದೇಶದ 10 ಪ್ರಮುಖ ಛಾಯಾಗ್ರಾಹಕರು ಸೆರೆಹಿಡಿದ ಕೇರಳದ ಸೌಂದರ್ಯವನ್ನು 100 ವಿಶೇಷ ಫ್ರೇಮ್‌ಗಳ ಮೂಲಕ ಅನಾವರಣಗೊಳಿಸುತ್ತಿದೆ.
ಫೆಬ್ರವರಿಯಲ್ಲಿ ನಡೆಯುವ ಒಡಿಸ್ಸಿ, ಕಥಕ್ಕಳಿ ಮತ್ತು ಭರತನಾಟ್ಯಂ ಒಳಗೊಂಡ ‘ನಿಶಾಗಂಧಿ ನೃತ್ಯೋತ್ಸವ’ ಪ್ರವಾಸಿಗರಿಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.