ಹದಗೆಟ್ಟ ರಸ್ತೆಯಲ್ಲಿ ಧೂಳಿನ ಮಜ್ಜನ 
ರಾಜ್ಯ

ಹದಗೆಟ್ಟ ರಸ್ತೆಯಲ್ಲಿ ಧೂಳಿನ ಮಜ್ಜನ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಹದಗೆಟ್ಟ ರಸ್ತೆಯಲ್ಲಿ ಧೂಳಿನ ಮಜ್ಜನ
  • ಗೋಟುರು ವಿಜಯಪುರ ರಸ್ತೆ ಕಾಮಗಾರಿ ವಿಳಂಬದಿಂದ ಸಮಸ್ಯೆ
  • ರಸ್ತೆ ಅಭಿವೃದ್ಧಿಗೆ ಸಾರ್ವಜನಿಕ ಆಗ್ರಹ
ಹದಗೆಟ್ಟ ರಸ್ತೆಯಲ್ಲಿ ಧೂಳಿನ ಮಜ್ಜನ
ಆನಂದ ಭಮ್ಮನ್ನವರ ಚಿಕ್ಕೋಡಿ
ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ 548ಬಿ ಹೆದ್ದಾರಿಯಲ್ಲಿ ಮೇಲ್ದರ್ಜೆಗೇರಿರುವ ಜಿಲ್ಲೆಯ ಗೋಟೂರ-ವಿಜಯಪುರ ರಸ್ತೆ ಕಾಮಗಾರಿ ವಿಳಂಬದಿಂದ, ರಸ್ತೆಯಲ್ಲಿ ತಗ್ಗು ಗುಂಡಿ ನಿರ್ಮಾಣಗೊಂಡು ಸವಾರರು ಹೈರಾಣಾಗಿದ್ದಾರೆ.
೨೦೧೮ರಲ್ಲಿ ಪ್ರಾರಂಭವಾದ ಈ ರಸ್ತೆ ಕಾಮಗಾರಿ ಆಮೆಗತಿಯಿಂದ ಸಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ವಿಜಯಪುರ ಮತ್ತು ಮಹಾರಾಷ್ಟ್ರದ ಮಿರಾಜ್, ಸಾಂಗ್ಲಿ, ಮುಂಬೈ ನಗರಗಳಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಓಡಾಟ ಹೆಚ್ಚುತ್ತಿದೆ. ರಸ್ತೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿದ ಕೋಟ್ಯಂತರ ರೂಪಾಯಿ ಅನುದಾನ, ಭೂಸ್ವಾದೀನ ಪ್ರಕ್ರಿಯೆ ವಿಳಂಬದಿಂದ ಕಾಮಗಾರಿಗೆ ವೇಗ ಸಿಗುತ್ತಿಲ್ಲ.
ಧೂಳಿನ ಮಜ್ಜನ:
ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ತಗ್ಗು ಗುಂಡಿಗಳು ನಿರ್ಮಾಣವಾಗಿ ಅಪಘಾತ ಸಂಭವಿಸಿದ ನಂತರ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಅಕಾರಿಗಳು ಕಾಟಾಚಾರಕ್ಕೆ ಎಂಬಂತೆ ಮಣ್ಣು ಮಿಶ್ರಿತ ಗರಸಿನಿಂದ ಗುಂಡಿ ಮುಚ್ಚಲಾಗಿದೆ. ಆದರೆ, ಇದರಿಂದ ಏಳುವ ಅಪಾರ ಪ್ರಮಾಣದ ಧೂಳಿನಿಂದ ಬೈಕ್ ಸವಾರರು, ಪಾದಚಾರಿಗಳಿಗೆ ರಸ್ತೆಯೇ ಕಾಣದಂತಾಗುತ್ತದೆ.
ಆರೋಗ್ಯದ ಮೇಲೆ ಪರಿಣಾಮ:
ರಸ್ತೆ ಧೂಳಿನಿಂದ ಹಿರಿಯರು, ಮಹಿಳೆಯರು, ಮಕ್ಕಳು ಮುಖಕ್ಕೆ ಹಾಕಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಧೂಳು ಅನೇಕರಿಗೆ ಶ್ವಾಸಕೋಶ, ಚರ್ಮ ರೋಗ ಸೇರಿ ಹತ್ತಾರು ಕಾಯಿಲೆಗೆ ತುತ್ತಾಗುವಂತೆ ಮಾಡಿದೆ. ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಮತ್ತು ತುರ್ತು ಗುಂಡಿಯನ್ನು ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
----
ಕೋಟ್ -೧
ಗೋಟೂರ-ವಿಜಯಪುರ ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿದ್ದು, ಚಾಲಕರಿಗೆ ರಸ್ತೆಯಲ್ಲಿ ತಗ್ಗು ಗುಂಡಿಯನ್ನು ನಿಭಾಯಿಸುವುದು ಒಂದು ಕಡೆಯಾದರೆ, ಮುಚ್ಚಲು ತುಂಬಿರುವ ಮಣ್ಣು ಧೂಳಿನಿಂದ ರಸ್ತೆ ಆವೃತ್ತವಾಗಿದೆ.
| ಡಿ.ಎ.ಖೋತ, ಮೊದಲ, ಖಾಸಗಿ ವಾಹನಗಳ ಒಕ್ಕೂಟ
---
ಕೋಟ್-೨
ಗೋಟೂರ-ಮುರಗುಂಡಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ. ರಸ್ತೆಯಲ್ಲಿನ ಗುಂಡಿ ಮುಚ್ಚುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಗುಂಡಿ ಮುಚ್ಚುವ ಕಾಮಗಾರಿ ಆರಂಭಗೊಂಡಿದೆ.
| ವಿವೇಕ ಮಠ, ಇಐಐ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಜಯಪುರ