- ರಾಜ್ಯ ರಾಜಧಾನಿಯಲ್ಲಿ ರೋಡ್ ರೇಜ್ (Road Rage) ಪ್ರಕರಣಗಳು ಹೆಚ್ಚಾಗುತ್ತಿವೆ
- ಬೆಂಗಳೂರಿನ ಟ್ರಿನಿಟಿ ಜಂಕ್ಷನ್ನಲ್ಲಿ ಪುಂಡಾಟ ಮೆರೆದ ಚಾಲಕ ಸುರೇಶ್
- ವ್ಯಕ್ತಿಯನ್ನು ಬಾನೆಟ್ ಮೇಲೆ ಎಳೆದೊಯ್ದ ಸುರೇಶ್ ಅರೆಸ್ಟ್
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೋಡ್ ರೇಜ್ (Road Rage) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕ ಹಾಗೂ ಕಳವಳಕಾರಿ. ಸಣ್ಣ ಸಣ್ಣ ವಿಚಾರಕ್ಕೆ ಅಥವಾ ಏನೂ ಇಲ್ಲದಿದ್ದರೂ ಸುಖಾಸುಮ್ಮನೆ ಇಂಥಾ ಹುಚ್ಚಾಟ ಮೆರೆಯುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಇದಕ್ಕೆಲ್ಲ ತಮ್ಮ ಶೈಲಿಯಲ್ಲೇ ಬಿಸಿ ಮುಟ್ಟಿಸುವ ಬೆಂಗಳೂರು ಪೊಲೀಸರು ಇದೀಗ ಮತ್ತೊಂದು ಪ್ರಕರಣದಲ್ಲಿ ಪುಂಡಾಟ ತೋರಿದ ಕಾರು ಚಾಲಕನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಟ್ರಿನಿಟಿ ಜಂಕ್ಷನ್ ಬಳಿ ಸುಮಾರು 1 ಕಿ.ಮೀ ದೂರ ತನ್ನ ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬನನ್ನು ಎಳೆದೊಯ್ದ ಕಾರು ಚಾಲಕ ಸುರೇಶ್ನನ್ನು ಸದ್ಯ ಹಲಸೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬುಧವಾರ (ಫೆ.11) ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದ್ದು, ಇತರ ವಾಹನ ಸವಾರರನ್ನು ಭಯಭೀತಿಗೆ ದೂಡಿದ್ದು ಆತಂಕಕಾರಿ. ಘಟನೆಯ ದೃಶ್ಯ ಮತ್ತೊಬ್ಬರ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಚಾಲಕ ಸುರೇಶ್ ಪುಲಕೇಶಿನಗರ ನಿವಾಸಿ ಎಂದು ಗುರುತಿಸಲಾಗಿದೆ. ಘಟನೆಯ ಸಮಯದಲ್ಲಿ, ಸುರೇಶ್ ಅವರ ಪತ್ನಿ ಕೂಡ ಕಾರಿನೊಳಗೆ ಇದ್ದರು ಎನ್ನಲಾಗಿದೆ. ಮತ್ತು ಕಾರು ಅವರ ಹೆಸರಿನಲ್ಲಿಯೇ ರಿಜಿಸ್ಟರ್ ಆಗಿದೆ. ಈ ಘಟನೆ ಮಧ್ಯಾಹ್ನ 12.45ರ ಸುಮಾರಿಗೆ ಸಂಭವಿಸಿದ್ದು, ಕಂಟೇನರ್ ಲಾರಿ ಚಾಲಕ ನಂಜುಂಡ ಮತ್ತು ಸುರೇಶ್ ನಡುವೆ ಸಣ್ಣ ಜಗಳವಾಗಿದೆ. ಕಾರಿನ ಮುಂದೆ ಹೋಗಿ ನಿಂತ ನಂಜುಂಡನ ಮೇಲೆ ಸುರೇಶ್ ಏಕಾಏಕಿ ಕಾರು ಚಲಾಯಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂಜುಂಡನನ್ನು ಬಾನೆಟ್ ಮೇಲೆ ಎಳೆದೊಯ್ದು ಪುಂಡಾಟ ತೋರಿದ ಎಸ್‌ಯುವಿ (ಕೆಎ-03-ಎನ್‌ಎನ್-4501) ಮಾಲೀಕ ಸುರೇಶ್ ಅತಿ ವೇಗದಲ್ಲಿ ವಾಹನ ಚಲಾಯಿಸಿರುವುದು ಕಂಡುಬಂದಿದೆ. ವಿಡಿಯೋದಲ್ಲಿ, ದಯವಿಟ್ಟು ಕಾರು ನಿಲ್ಲಿಸಿ ಎಂದು ಬೇಡಿಕೊಂಡರೂ, ಚೀರಾಡಿದರೂ ಸುರೇಶ್ ಮಾತ್ರ ಕಾರು ನಿಲ್ಲಿಸಿಲ್ಲ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ, ಚಾಲಕ ಅತಿವೇಗದ ಚಾಲನೆ ಮತ್ತು ಮೋಟಾರು ವಾಹನ ಕಾಯ್ದೆಯ ಇತರ ಉಲ್ಲಂಘನೆಗಳಲ್ಲಿ ಈ ಹಿಂದೆಯೂ ಇದೇ ರೀತಿ ಮಾಡಿರುವುದು ಗೊತ್ತಾಗಿದೆ ಎಂದು 'ಡೆಕ್ಕನ್ ಹೆರಾಲ್ಡ್' ತನ್ನ ವರದಿಯಲ್ಲಿ ಉಲ್ಲೇಖಿಸಿದೆ,(ಏಜೆನ್ಸೀಸ್).