Riot over road issue in Ugani village 
ರಾಜ್ಯ

ಉಗಣಿ ಗ್ರಾಮದಲ್ಲಿ ದಾರಿ ವಿಚಾರಕ್ಕೆ ದಾಂಧಲೆ

ಮುಳಬಾಗಿಲು: ಆಂಧ್ರ ಗಡಿಭಾಗದ ಉಗಣಿ ಗ್ರಾಮದಲ್ಲಿ ಶನಿವಾರ ಸಂಜೆ ಗ್ರಾಮಠಾಣಾ ಜಮೀನಿನಲ್ಲಿ ದಾರಿ ವಿಚಾರಕ್ಕೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದೆ.
ಆಂಧ್ರದ ಕೆಂಚಾಲ ಉಗಣಿ ಗ್ರಾಮದ 50 ಮಂದಿ ಅನ್ಯಕೋಮಿನವರು ಮಡಿವಾಳ ಸಮುದಾಯ ಕುಟುಂಬದ ಮೇಲೆ ದೊಣ್ಣೆ ಮತ್ತು ಕೋಲುಗಳಿಂದ ಹಲ್ಲೆ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು, ನಂಗಲಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಗನಿ ಗ್ರಾಮದ ಪದ್ಮಮ್ಮ (46), ಮುನೇಶ್ವರಿ (32), ಜೀವಿತಾ (18), ಮೋನಿಕಾ(16), ಮಧು(14) ಗಾಯಗೊಂಡಿದ್ದು, ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಮಣಪ್ಪ, ಕೇಶವ, ಚಲಪತಿ ನಂಗಲಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮುಳಬಾಗಿಲು ಮತ್ತು ಮತ್ತಿತರ ಕಡೆಯಿಂದ ಹೆಚ್ಚುವರಿ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಪರಿಸ್ಥಿತಿ ತಹಬದಿಗೆ ಬಂದಿದೆ.
ಗ್ರಾಮದ ರಮಣ ಅವರ ಕುಟುಂಬದ ಮಹಿಳೆಯರು ಸೇರಿ 6 ಮಂದಿ ಗಾಯಗೊಂಡಿದ್ದು, ಗಲಾಟೆಯ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿವೆ.
ಕುಟುಂಬದ ಮೇಲೆ ಅನ್ಯಕೋಮಿನವರು ದಾಳಿ ಮಾಡಿದಾಗ ಗ್ರಾಮದ ಅದೇ ಕೋಮಿನವರು ಬಂದು ಬಿಡಿಸಿದ್ದಾರೆ.
ಉಗಣಿ ಗ್ರಾಮದ ಬಿಲಾಲ್​ ಕುಟುಂಬಕ್ಕೂ ಮತ್ತು ಮಡಿವಾಳ ಸಮುದಾಯದ ಕುಟುಂಬಕ್ಕೂ ವಾಡಿಕೆ ದಾರಿ ಯಥಾಸ್ಥಿತಿ ಬಿಡಲು ರಮಣ ಕುಟುಂಬ ಒತ್ತಾಯ ಮಾಡಿದಾಗ ಬಿಲಾಲ್​ ಪಕ್ಕದ ಗ್ರಾಮದಿಂದ 50 ಜನರನ್ನು ಕರೆಸಿ ಅಶಾಂತಿ ಸೃಷ್ಟಿ ಮಾಡಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.