ಬೆಂಗಳೂರು: ರಾಜ್ಯದಲ್ಲಿ ಹಾಡಿ, ಹಟ್ಟಿ, ತಾಂಡಗಳು ಸೇರಿ ಕಂದಾಯ ಗ್ರಾಮಗಳಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ ಅರ್ಹರಿಗೂ ಹಕ್ಕು ಪತ್ರ ನೀಡಲಾಗುತ್ತದೆ. ಆದರೆ, ಸರ್ಕಾರಿ ಜಮೀನು ಕಬಳಿಸಲು ಯಾರಿಗೂ ಬಿಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕಂದಾಯ ಗ್ರಾಮಗಳಲ್ಲಿ ನೆಲೆಸಿರುವರಿಗೆ ಹಕ್ಕು ಪತ್ರ ವಿತರಿಸಲು 2016ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಯ್ದೆ ಪ್ರಕಾರ ಷರತ್ತುಗಳು ಪೂರ್ಣಗೊಂಡರೆ ಗುಡಿಸಲಿನಲ್ಲಿ ವಾಸವಾಗಿದ್ದರೂ ಹಕ್ಕುಪತ್ರ ನೀಡಬಹುದು ಎಂದು ಅಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಿದರು.
ಹಕ್ಕುಪತ್ರ ವಿತರಣೆ ಮಾಡುವ ಲಾಗಿನ್ ಸ್ಥಗಿತ ಮಾಡಿಲ್ಲ. ಕೇಂದ್ರ ಸರ್ಕಾರ ಜನಗಣತಿ ನಡೆಸುವ ಉದ್ದೇಶಕ್ಕೆ ಜೂನ್ 27ರವರೆಗೆ ಯಾವುದೇ ಗ್ರಾಮಗಳ ಬದಲಾವಣೆ ಮಾಡದಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಆದರಿಂದ ಉಳಿದ ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ ವಿತರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇನ್ನೂ 1300 ಕಂದಾಯ ಗ್ರಾಮಗಳು ಉಳಿದಿದ್ದು, ಅಂದಾಜು 1.30 ಲಕ್ಷ ಹಕ್ಕುಪತ್ರಗಳ ವಿತರಣೆ ಮಾಡಬೇಕಿದೆ.
ಮಾರ್ಚ್ 16ರೊಳಗಾಗಿ ಎಲ್ಲ ಕಂದಾಯ ಗ್ರಾಮಗಳಿಗೆ ಅರ್ಜಿ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೂನ್ 27ರ ಬಳಿಕ ಉಳಿದವರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.